ಶನಿವಾರಸಂತೆ, ಸೆ. ೨೭: ಸಮೀಪದ ಕೊಡ್ಲಿಪೇಟೆಯ ಕಾಮಧೇನು ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸ್ಥಳೀಯ ಚೌಡೇಶ್ವರಿ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಸಭೆಯಲ್ಲಿ ಲೆಕ್ಕ ಪರಿಶೋಧನಾ ವರದಿ, ಹಿಂದಿನ ಮಹಾಸಭೆಯ ನಡಾವಳಿ ಹಾಗೂ ೨೦೨೨-೨೩ನೇ ಸಾಲಿನ ಅಂದಾಜು ಆಯವ್ಯಯ ಪತ್ರವನ್ನು ಮಂಡಿಸಿ, ಅನುಮೋದನೆ ಪಡೆದರು.
ಸಭೆಯಲ್ಲಿ ಮರಣನಿಧಿ ರೂಪಿಸುವುದು ಹಾಗು ಡಿವಿಡೆಂಡ್ ಹಣವನ್ನು ಸಂಘದ ಕಟ್ಟಡ ನಿರ್ಮಾಣಕ್ಕೆ ಬಳಸುವಂತೆ ಕೆಲ ಸದಸ್ಯರು ಸಲಹೆ ನೀಡಿದರು. ಶೇ. ೯ ಡಿವಿಡೆಂಡ್ ನೀಡಲು ಮತ್ತು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸಭೆ ನಿರ್ಣಯ ಕೈಗೊಂಡಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಕೆ. ರೇಣುಕ ಮಾತನಾಡಿ, ಸಂಘದ ಕಾರ್ಯಾಚರಣೆ ಆರಂಭಿಸಿ ೬ ವರ್ಷಗಳಾಗಿದೆ. ಅಭಿವೃದ್ಧಿ ಹೊಂದಿದ ಮೇಲೆ ಮರಣನಿಧಿ ರೂಪಿಸಲು ಚಿಂತನೆ ನಡೆಸಲಾಗುವುದು. ಸರ್ವ ಸದಸ್ಯರ ಸಹಕಾರ ಮುಖ್ಯವಾಗಿದ್ದು ನಿರೀಕ್ಷೆಯಂತೆ ಮುನ್ನಡೆಯುತ್ತಿದೆ ಎಂದರು.
ನಿರ್ದೇಶಕರಾದ ಹೆಚ್.ಎಂ. ದಿವಾಕರ್, ಸುಧೀಂದ್ರ ಕುಮಾರ್, ಚಂದ್ರಶೇಟ್ಟಿ, ಕೆ.ಜಿ. ಕುಮಾರ್ ಸ್ವಾಮಿ, ಡಿ.ಹೆಚ್. ರಮೇಶ್, ಎ.ಎಂ. ಕುಮಾರಸ್ವಾಮಿ, ರಂಜಿತಾ, ಎಸ್.ಎಸ್. ರಮೇಶ್, ಸಿಬ್ಬಂದಿ ಅನಿಲ್, ಕೌಶಿಕ್ ಉಪಸ್ಥಿತರಿದ್ದರು.