ಸೋಮವಾರಪೇಟೆ, ಸೆ. ೨೭: ಫ್ರೂಟ್ಸ್ ಹೆಸರಿನ ಕಾನೂನಿನಿಂದ ಜಂಟಿಯಾಗಿರುವ ಆರ್‌ಟಿಸಿಯಲ್ಲಿ ಒಬ್ಬರಿಗೆ ಮಾತ್ರ ಶೂನ್ಯ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಉಳಿದ ರೈತ ಕುಟುಂಬಗಳಿಗೆ ಅನ್ಯಾಯವಾಗುತ್ತದೆ. ಫಾರಂ-೩ ಸಲ್ಲಿಸುವ ನಿಯಮವನ್ನು ಸರ್ಕಾರ ಕೂಡಲೇ ವಾಪಾಸ್ಸು ಪಡೆದು, ಸಹಕಾರ ಸಂಘ ಮತ್ತು ರೈತರನ್ನು ರಕ್ಷಿಸಬೇಕು ಎಂದು ಗೌಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ಆಗ್ರಹಿಸಿದರು.
ಗೌಡಳ್ಳಿ ಬಿಜಿಎಸ್ ಶಾಲಾ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡಗಿನಲ್ಲಿ ಬೇಕಾದಷ್ಟು ಹಿಡುವಳಿ ಗಳಿವೆ.
ಬಹುತೇಕ ರೈತ ಕುಟುಂಬಗಳ ಆಸ್ತಿ ಜಂಟಿ ಖಾತೆಯಲ್ಲಿರುತ್ತವೆ. ಈ ಹಿಂದಿನ ವರ್ಷಗಳಲ್ಲಿ ಆರ್‌ಟಿಸಿ ಯಲ್ಲಿದ್ದ ಎಲ್ಲಾ ರೈತರಿಗೂ ಸಹಕಾರ ಸಂಘಗಳಲ್ಲಿ ಸಾಲ ಸಿಗುತ್ತಿತ್ತು. ಈಗಿರುವ ಕಠಿಣ ಕಾನೂನಿನಿಂದ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ. ೯೦.೬೯ ಲಕ್ಷಗಳ ನಿವ್ವಳ ಲಾಭಗಳಿಸಿದೆ. ಸಂಘದಲ್ಲಿ ಒಟ್ಟು ೨೩೮೭ ಸದಸ್ಯರಿದ್ದು, ಪಾಲು ಬಂಡವಾಳ ರೂ. ೨.೨೨ ಕೋಟಿ ಇದೆ. ಪ್ರಸಕ್ತ ಶೇ. ೨೫ ರಷ್ಟು ಡಿವಿಡೆಂಡ್ ವಿತರಿಸಲಾಗುವುದು ಎಂದರು.
ಎರಡು ಎಕರೆ ಆಸ್ತಿ ಹೊಂದಿದ ರೈತನು ಸುಧಾರಿತ ಕೃಷಿ ಮಾಡುತ್ತಾನೆ. ಕೃಷಿಗೆ ಕಾಡುಪ್ರಾಣಿಗಳ ಉಪಟಳವಿದೆ. ಬೆಳೆರಕ್ಷಣೆಗಾಗಿ ಈ ಹಿಂದೆ ಎಲ್ಲಾ ರೈತರಿಗೂ ಬಂದೂಕು ಪರವಾನಗಿ ನೀಡಲಾಗುತ್ತಿತ್ತು. ಈಗ ೫ ಎಕರೆ ಆಸ್ತಿ ಹೊಂದಿದವರಿಗೆ ಬಂದೂಕು ಪರವಾನಗಿ ನೀಡಲಾಗುತ್ತಿದೆ. ಇದು ಜಿಲ್ಲಾಡಳಿತದ ಅವೈಜ್ಞಾನಿಕ ನಿಯಮವಾಗಿದೆ.
ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೆ ಪರವಾನಗಿ ನೀಡಬೇಕೆಂದು ಕೃಷಿಕರಾದ ಹೆಚ್.ಎಸ್. ಶರಣ್, ಸುರೇಶ್, ನಾಗರಾಜ್, ಜಯಪ್ಪ ಮತ್ತಿತರರು ಜಿಲ್ಲಾಡಳಿತವನ್ನು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು.
ಆಸ್ತಿ ದುರಸ್ತಿ, ಪೋಡಿಯಾಗದ ಹಿನ್ನೆಲೆಯಲ್ಲಿ ಸಹಕಾರ ಸಂಘದ ಸೌಲಭ್ಯ ರೈತರಿಗೆ ಸಿಗುತ್ತಿಲ್ಲ. ಲಂಚ ನೀಡಿದರೆ ಆಸ್ತಿ ದುರಸ್ತಿ ಕೆಲಸಗಳು ಆಗುತ್ತವೆ. ಲಂಚ ಕೊಡಲಾಗದ ಅರ್ಜಿಗಳು ತಾಲೂಕು ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ. ಜಿಲ್ಲಾಧಿಕಾರಿ ಗಳನ್ನು ಗ್ರಾಮ ವಾಸ್ತವ್ಯಕ್ಕೆ ಕರೆದು ಕಂದಾಯ ಇಲಾಖೆಯ ಲೋಪ ದೋಷಗಳನ್ನು ಹೇಳಬೇಕು ಎಂದು ರೈತರು ಆಗ್ರಹಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಅಧ್ಯಕ್ಷರು ಹೇಳಿದರು. ಸಕಲೇಶಪುರ ತಾಲೂಕಿನಲ್ಲಿ ಮಳೆಹಾನಿ ಪರಿಹಾರ ವಿತರಿಸಲಾಗಿದೆ. ಆದರೆ ಕೊಡಗಿನಲ್ಲಿ ಮಳೆಹಾನಿ ಬಗ್ಗೆ ಸರ್ವೆ ಆಗಿಲ್ಲ. ನಮ್ಮ ಜನಪ್ರತಿನಿಧಿಗಳು ಒತ್ತಡ ತರಬೇಕು ಎಂದು ರೈತರು ಒತ್ತಾಯಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರುಗಳಾದ ಎಸ್.ಬಿ. ಭರತ್‌ಕುಮಾರ್, ಬಿ.ಕೆ. ಚಿಣ್ಣಪ್ಪ ಹಾಗೂ ಬಿ.ಡಿ. ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.
ಹತ್ತನೆ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕೂಗೂರು ಗ್ರಾಮದ ಹೆಚ್.ಜೆ. ಸಾನಿಕ (ಶೇ. ೯೮.೫೦), ಬಸವನಕೊಪ್ಪ ಗ್ರಾಮ ಬಿ.ಎಲ್. ಪ್ರೇಕ್ಷಾ (ಶೇ. ೯೪.೨೪), ಕೂಗೂರು ಗ್ರಾಮ ವಿ.ಡಿ. ಚುಕ್ಕಿ (ಶೇ. ೯೪) ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಎನ್.ಎಸ್. ಪರಮೇಶ, ನಿರ್ದೇಶಕರು ಗಳಾದ ವಿ.ಎನ್. ನಾಗರಾಜ್, ಸುನಿಲ್ ಕುಮಾರ್, ಸಿ.ಎ. ಮಮತ, ಹೆಚ್.ಎಸ್. ಪುಷ್ಪ, ಡಿ.ಪಿ. ಸುಮಿತ್ರ, ಟಿ.ಎಸ್. ವಾಣಿ, ಕೆ.ಜಿ. ದಿನೇಶ್, ಸಿ.ಈ. ವೆಂಕಟೇಶ್, ಕೆಡಿಸಿಸಿ ಬ್ಯಾಂಕ್‌ನ ನವೀನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ.ಕೆ. ಪೊನ್ನಪ್ಪ ಇದ್ದರು.