ಪೊನ್ನಂಪೇಟೆ, ಸೆ. ೨೫: ವಿಶ್ವ ಮುಸ್ಲಿಮರ ಪವಿತ್ರವಾಗಿರುವ ಕಾಬಾ ಸಂದರ್ಶನ ವಿಶ್ವಾಸಿಗಳನ್ನು ಸತ್ಕರ್ಮಗಳೆಡೆಗೆ ಪ್ರೇರೇಪಿಸುತ್ತದೆ. ಪವಿತ್ರ ಮಕ್ಕ ಮತ್ತು ಮದೀನ ಮಣ್ಣಿನ ಸ್ಪರ್ಶ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಶನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಎಚ್. ಸೂಫಿ ಹಾಜಿ ಅವರು ಹೇಳಿದರು.

ವೀರಾಜಪೇಟೆಯ ಎನ್.ಸಿ.ಟಿ. ಸಂಸ್ಥೆ ವತಿಯಿಂದ ನಡೆದ ಉಮ್ರಾ ಯಾತ್ರಾರ್ಥಿಗಳ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರವಾದಿ ಮುಹಮ್ಮದ್ ಅವರು ಅನುಸರಿಸಿದ ಸರ್ವಶಕ್ತನ ತ್ಯಾಗ ಮತ್ತು ವಿಧೇಯತೆಯ ಅಸ್ಮಿತೆಯನ್ನು ಹೊಂದಿರುವ ಮತ್ತು ವಿಶ್ವಾಸಿಗಳ ಆಧ್ಯಾತ್ಮಿಕ ಬದುಕಿನ ಸ್ವಯಂ ನವೀಕರಣ ಮಹತ್ವದ ಘಟ್ಟವಾಗಿರುವ ಹಜ್ಜ್ ಯಾತ್ರೆಗೆ ಮುಂಚಿತವಾದ ಉಮ್ರಾ ಭೇಟಿ ಹೆಚ್ಚು ಅನುಭವವನ್ನು ಕಲಿಸುತ್ತದೆ ಎಂದು ಸೂಫಿ ಹಾಜಿ ತಿಳಿಸಿದರು.

ಕಾರ್ಯಾಗಾರದಲ್ಲಿ ವಿಶೇಷ ತರಬೇತುದಾರರಾಗಿ ಪಾಲ್ಗೊಂಡಿದ್ದ ಯಾತ್ರೆಯ ಅಮೀರರಾದ ಆಲಿ ಮುಸ್ಲಿಯಾರ್ ಗುಂಡಿಕೆರೆ ಅವರು ಉಮ್ರಾ ಯಾತ್ರೆಯ ಆರಂಭದಿAದ ಅಂತ್ಯದವರೆಗಿನ ಕುರಿತ ಧಾರ್ಮಿಕ ವಿಧಿ ವಿಧಾನಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಅಲ್ಲದೆ ಎನ್.ಸಿ.ಟಿ. ಮೂಲಕ ಈ ಬಾರಿ ತೆರಳುತ್ತಿರುವ ಉಮ್ರಾ ಯಾತ್ರಾರ್ಥಿಗಳಿಗೆ ಉಮ್ರಾ ಕಿಟ್ ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಇದಕ್ಕೂ ಮೊದಲು ಕಾರ್ಯಾಗಾರವನ್ನು ವಿದ್ವಾಂಸರಾದ ಎಮ್ಮೆಮಾಡಿನ ಇಲ್ಯಾಸ್ ತಂಗಳ್ ಉದ್ಘಾಟಿಸಿದರು. ವೇದಿಕೆಯಲ್ಲಿ ಎನ್.ಸಿ.ಟಿ. ಸಂಸ್ಥೆಯ ಮುಖ್ಯಸ್ಥರಾದ ಅಕ್ಕಳತಂಡ ಎಸ್. ಮೊಯ್ದು, ಅಂಬಟ್ಟಿ ಜುಮ್ಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಎ. ಯೂಸುಫ್, ಎಮ್ಮೆಮಾಡಿನ ಸೈಫುದ್ದೀನ್ ತಂಗಳ್, ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ರಫೀಕ್ ಸಹದಿ, ಸದರ್ ಮುಸ್ಲಿಯಾರ್ ಅಶ್ರಫ್ ಅಲ್ರಮಿ, ಎನ್. ಸಿ.ಟಿ. ಸಂಸ್ಥೆಯ ವ್ಯವಸ್ಥಾಪಕರಾದ ಕೆ.ಎ. ಹನೀಫ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಕೆ.ಎಂ. ಶರೀಫ್ ಸ್ವಾಗತಿಸಿ, ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೂರಾರು ಉಮ್ರಾ ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು.