ಪ್ಲಾಸ್ಟಿಕ್ ರಹಿತ ಚೀಲ ಬಳಸಲು ಮೋದಿ ಕರೆ
ನವದೆಹಲಿ, ಸೆ. ೨೫: ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ರಹಿತ ಮರುಬಳಕೆಯ ಚೀಲಗಳನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ‘ಮನ್ ಕಿ ಬಾತ್’ ಮೂಲಕ ದೇಶದ ಜನತೆಗೆ ಕರೆ ನೀಡಿದ್ದಾರೆ. ಪ್ಲಾಸ್ಟಿಕ್ ಬದಲಿಗೆ ಹಬ್ಬ ಹರಿದಿನಗಳಲ್ಲಿ ಜನರು ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ ರಹಿತ ಚೀಲಗಳನ್ನೇ ಬಳಸಬೇಕು. ಸೆಣಬು, ಹತ್ತಿ, ಬಾಳೆ ನಾರು, ಇಂತಹ ಹಲವು ಸಾಂಪ್ರದಾಯಿಕ ಚೀಲಗಳ ಬಳಕೆಯನ್ನು ಹೆಚ್ಚೆಚ್ಚು ಬಳಸಿ ಎಂದು ಒತ್ತಾಯಿಸಿದ್ದಾರೆ. ಇಂದು ಮನ್ ಕಿ ಬಾತ್ ನಲ್ಲಿ ನನಗೆ ಭಾರತಕ್ಕೆ ತಂದಿರುವ ಚೀತಾಗಳ ಬಗ್ಗೆ ಮಾತನಾಡಲು ಹಲವರು ಒತ್ತಾಯಿಸಿದ್ದಾರೆ. ದೇಶದ ಜನತೆ ಚೀತಾ ತಂದಿದ್ದಕ್ಕೆ ಖುಷಿಪಟ್ಟಿದ್ದಾರೆ. ಚೀತಾಗಳು ನೋಡಲು ಯಾವಾಗ ಅವಕಾಶ ಸಿಗುತ್ತದೆ ಎಂದು ಕೇಳಿದ್ದಾರೆ. ಮೊದಲು ನಾನು ಈ ಬಗ್ಗೆ ಸ್ಪರ್ಧೆಯೊಂದರ ಬಗ್ಗೆ ಹೇಳುತ್ತೇನೆ. ನೀವೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಇದರಲ್ಲಿ ಗೆಲ್ಲುವ ಮೂಲಕ ನಿಮಗೆ ಚೀತಾಗಳನ್ನು ನೋಡುವ ಅವಕಾಶ ಸಿಗಬಹುದು ಎಂದು ಮೋದಿ ಹೇಳಿದ್ದಾರೆ. ಬೆಂಗಳೂರು ಮೂಲದ ಯೂತ್ ಫಾರ್ ಪರಿವರ್ತನ್ ಎಂಬ ಸ್ವಯಂ ಸೇವಾ ಸಂಸ್ಥೆ ಬಗ್ಗೆ ಪ್ರಸ್ತಾಪಿಸಿದ ಅವರು, ಅದರ ಸಮಾಜಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇಂದು ರಾಜ್ಯಕ್ಕೆ ರಾಷ್ಟçಪತಿ ಆಗಮನ
ಬೆಂಗಳೂರು, ಸೆ. ೨೫: ರಾಷ್ಟçಪತಿ ದ್ರೌಪದಿ ಮುರ್ಮು ತಾ. ೨೬ ರಂದು (ಇಂದು) ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟçಪತಿಯಾದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ದ್ರೌಪದಿ ಮುರ್ಮು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ರಾಷ್ಟçಪತಿ ಭವನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಆಯೋಜಿಸಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ರಾಷ್ಟçಪತಿ, ಧಾರವಾಡದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನೂತನ ಕ್ಯಾಂಪಸ್ನ್ನು ಉದ್ಘಾಟಿಸಲಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಹೆಚ್ಎಎಲ್ನ ಇಂಟಿಗ್ರೆಟೆಡ್ ಕ್ರಯೊಜಿನಿಕ್ ಇಂಜಿನ್ಸ್ ತಯಾರಿಕಾ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದಕ್ಷಿಣ ವಲಯ ವೈರಾಣು ಸಂಸ್ಥೆಗೆ ವರ್ಚುಯಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಂದೇ ಸೆಂಟ್ ಜೋಸೆಫ್ ವಿವಿ ಸಮಾರಂಭ ಹಾಗೂ ಕರ್ನಾಟಕ ಸರ್ಕಾರದಿಂದ ಆಯೋಜಿಸಿರುವ ನಾಗರಿಕ ಸನ್ಮಾನ ಸಮಾರಂಭದಲ್ಲಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ ಎಂದು ರಾಷ್ಟçಪತಿ ಭವನದ ಹೇಳಿಕೆ ತಿಳಿಸಿದೆ. ತಾ. ೨೮ ರಂದು ರಾಷ್ಟçಪತಿ ನವದೆಹಲಿಗೆ ವಾಪಸ್ಸಾಗಲಿದ್ದಾರೆ.
ವಿಪಕ್ಷಗಳ ಮುಖಂಡರ ಮೆಗಾ ರ್ಯಾಲಿ
ಫತೇಹಾಬಾದ್, ಸೆ. ೨೫: ೨೦೨೪ ರಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾಗುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಕೆಲಸ ಮಾಡುವ ಸಮಯ ಬಂದಿದೆ ಎಂದು ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಭಾರತೀಯ ರಾಷ್ಟಿçÃಯ ಲೋಕದಳ ಆಯೋಜಿಸಿದ್ದ ವಿಪಕ್ಷಗಳ ಮುಖಂಡರ ಮೆಗಾ ರ್ಯಾಲಿಯಲ್ಲಿ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ಉಲ್ಲೇಖಿಸಿದ ಪವಾರ್, ರೈತರ ಆತ್ಮಹತ್ಯೆ ಪರಿಹಾರವಲ್ಲ ಮತ್ತು ಸರ್ಕಾರದಲ್ಲಿ ಬದಲಾವಣೆ ತರುವುದು ನಿಜವಾದ ಪರಿಹಾರವಾಗಿದೆ ಎಂದು ಹೇಳಿದರು. ಇದೇ ರ್ಯಾಲಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ಬಿಜೆಪಿಯೇತರ ಪಕ್ಷಗಳು ಒಗ್ಗೂಡಲು ಕರೆ ನೀಡಿದರು. ಈ ವಿಪಕ್ಷಗಳ ಕೂಟವು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲಿದೆ ಎಂದು ಹೇಳಿದರು. ತಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದರು.
ಭಾರೀ ಮಳೆ, ಸಿಡಿಲಿಗೆ ೩೬ ಮಂದಿ ಸಾವು
ಲಖನೌ, ಸೆ. ೨೫: ಉತ್ತರ ಭಾರತದಲ್ಲಿ ಅಪಾಯಕಾರಿ ವಾತಾವರಣದಿಂದಾಗಿ ಕಳೆದ ೨೪ ಗಂಟೆಗಳಲ್ಲಿ ೩೬ ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ೧೨ ಜನರು ಸಿಡಿಲಿಗೆ ಬಲಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಕುಸಿತದಿಂದ ೨೪ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಆಯುಕ್ತ ರಣವೀರ್ ಪ್ರಸಾದ್ ಹೇಳಿದ್ದಾರೆ. ಕಳೆದ ಐದು ದಿನಗಳಲ್ಲಿ ಸಿಡಿಲು ಬಡಿದು ೩೯ ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದು, ಗುಡುಗು ಸಹಿತ ಮಳೆ ಸಮಯದಲ್ಲಿ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದಕ್ಕೆ ಹೊಸ ಮಾರ್ಗಸೂಚಿಗಳನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭೀಕರ ಅಪಘಾತದಲ್ಲಿ ನಾಲ್ವರ ದುರ್ಮರಣ
ಬೆಳಗಾವಿ, ಸೆ. ೨೫: ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಕುಟುಂಬದ ಇಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಲಾರಿ, ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಈ ಅಪಘಾತವಾಗಿದೆ. ಮೃತರನ್ನು ಕುಡಚಿ ಎಎಸ್ಐ ಪರಶುರಾಮ ಹಲಕಿ ಅವರ ಪತ್ನಿ ರುಕ್ಮಿಣಿ ಹಲಕಿ (೪೮), ಪುತ್ರಿ ಅಕ್ಷತಾ (೨೨) ಕಾರ್ ಚಾಲಕ ನಿಖಿಲ್ ಕದಂ (೨೪) ಹಣಮವ್ವ ಚಿಪ್ಪಲಕಟ್ಟಿ ಎಂದು ಗುರುತಿಸಲಾಗಿದೆ. ಪರಶುರಾಮ ಅವರ ಪತ್ನಿ, ಪುತ್ರಿ ಕಾರಿನಲ್ಲಿ ಯರಗಟ್ಟಿ ಕಡೆಗೆ ಹೊರಟಿದ್ದಾಗ ಎದುರಿಗೆ ಬಂದ ಸಿಮೆಂಟ್ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಹಿಂದೆಯೇ ಹೊರಟಿದ್ದ ಬೈಕ್ ಸವಾರರಿಗೂ ಈ ವಾಹನಗಳು ಗುದ್ದಿವೆ. ಅಪಘಾತದ ರಭಸಕ್ಕೆ ಕಾರು, ಬೈಕ್ ಸಂಪೂರ್ಣ ನಜ್ಜುಗುಜ್ಜಾದವು. ರುಕ್ಮಿಣಿ, ಅಕ್ಷತಾ ಹಾಗೂ ನಿಖಿಲ್ ಸ್ಥಳದಲ್ಲೇ ಕೊನೆಯುಸಿರೆಳೆದರು. ಹಣಮವ್ವ ಎನ್ನುವ ವೃದ್ಧೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇಬ್ಬರು ಉಗ್ರರ ಹತ್ಯೆ
ಶ್ರೀನಗರ, ಸೆ. ೨೫: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲ್ ಸೆಕ್ಟರ್ನ ಗಡಿ ನಿಯಂತ್ರಣ ರೇಖೆ ಬಳಿ ಭಾನುವಾರ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಉಗ್ರರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಕುಪ್ವಾರದ ಮಚಿಲ್ ಪ್ರದೇಶದ ಟೆಕ್ರಿ ನಾರ್ ಎಲ್ಒಸಿ ಬಳಿ ಭದ್ರತಾ ಪಡೆ ಮತ್ತು ಕುಪ್ವಾರ ಪೊಲೀಸರು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ೦೨ ಎಕೆ ೪೭ ರೈಫಲ್ಗಳು, ೦೨ ಪಿಸ್ತೂಲ್ಗಳು ಮತ್ತು ೦೪ ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಡುಕೋರರ ಒತ್ತೆಯಾಳಾಗಿರುವ ಭಾರತೀಯರು
ಬೆಂಗಳೂರು, ಸೆ. ೨೫: ಮ್ಯಾನ್ಮಾರ್ನಲ್ಲಿ ಬಂಡುಕೋರರ ಒತ್ತೆಯಾಳಾಗಿರುವ ಅನೇಕ ಭಾರತೀಯರ ಪೈಕಿ ಕರ್ನಾಟಕದ ವ್ಯಕ್ತಿಯೊಬ್ಬರಿರುವ ಕುರಿತಾದ ವರದಿಗಳ ಬೆನ್ನಲ್ಲೇ ಅಗತ್ಯ ವಿವರಗಳನ್ನು ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರದೊAದಿಗೆ ಸಮನ್ವಯ ಸಾಧಿಸಲಿದ್ದಾರೆ. ಈ ಬಗ್ಗೆ ವಿವರಗಳನ್ನು ಪಡೆಯಲು ರಾಜ್ಯದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮಿಳುನಾಡು ಮತ್ತು ತೆಲಂಗಾಣದ ಅನೇಕರು ಸೇರಿದಂತೆ ಸುಮಾರು ೫೦೦ ಭಾರತೀಯರು ಮ್ಯಾನ್ಮಾರ್ನಲ್ಲಿ ಬಂಡುಕೋರರ ವಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ನೇಮಕಾತಿ ಏಜೆನ್ಸಿಗಳು ಯುವಕರಿಗೆ ಥೈಲ್ಯಾಂಡ್ನಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ವಂಚಿಸುತ್ತಿವೆ. ಯುವಕರನ್ನು ಬಲವಂತವಾಗಿ ಮ್ಯಾನ್ಮಾರ್ಗೆ ಕರೆದೊಯ್ಯಲಾಗಿದೆ ಮತ್ತು ಸೈಬರ್ ಅಪರಾಧಿಗಳಾಗಿ ಕೆಲಸ ಮಾಡಲು ಒತ್ತಾಯಿಸಲಾಗಿದೆ. ಬಂಡುಕೋರರಿAದ ಒತ್ತೆಯಾಳುಗಳಾಗಿದ್ದವರಲ್ಲಿ ಹೆಚ್ಚಿನವರು ಕೇರಳ ಮತ್ತು ತಮಿಳುನಾಡಿನವರಾಗಿದ್ದರೆ, ಕರ್ನಾಟಕದ ಒಬ್ಬರೂ ಸಹ ಸೆರೆಯಲ್ಲಿದ್ದಾರೆ ಎಂಬ ವರದಿಗಳಿವೆ. ಆದರೆ, ಆ ವ್ಯಕ್ತಿಯ ಗುರುತು ಅಥವಾ ರಾಜ್ಯದಲ್ಲಿ ಆತನ ಸ್ಥಾನದ ಬಗ್ಗೆ ರಾಜ್ಯ ಸರ್ಕಾರದ ಬಳಿ ಯಾವುದೇ ಮಾಹಿತಿಯಿಲ್ಲ.