ಗೋಣಿಕೊಪ್ಪಲು, ಸೆ.೨೫: ಹುಲಿ ದಾಳಿಗೆ ಕಾರ್ಮಿಕ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಪರಿಹಾರ ಕೊಡುವ ತನಕ ತಮ್ಮ ಪ್ರತಿಭಟನೆ ಮುಂದುವರಿಸಿದ್ದರು. ಗ್ರಾಮಸ್ಥರ ಹಾಗೂ ರೈತ ಸಂಘಟನೆಯ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಧ್ಯರಾತ್ರಿಯ ವೇಳೆ ಮೃತನ ಕುಟುಂಬಕ್ಕೆ ಆರಂಭಿಕ ಹಂತದಲ್ಲಿ ನೀಡುವ ಎರಡು ಲಕ್ಷ ಪರಿಹಾರ ಚೆಕ್ ಹಾಗೂ ಶವ ಸಂಸ್ಕಾರಕ್ಕಾಗಿ ೨೦ ಸಾವಿರ ನಗದು ಸೇರಿದಂತೆ ಮೃತ ಕುಟುಂಬದ ಓರ್ವ ವ್ಯಕ್ತಿಗೆ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ ನೀಡುವ ಭರವಸೆ ನೀಡಿದ ಬಳಿಕ ಮೃತ ದೇಹವನ್ನು ಕಾನೂರು ಆಸ್ಪತ್ರೆಯಿಂದ ಗೋಣಿಕೊಪ್ಪ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವುದಕ್ಕೆ ಅವಕಾಶ ಕಲ್ಪಿಸಿದರು.

ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿದ ಕಾನೂರು ಸಮೀಪದ ಬೊಮ್ಮಾಡು ಹಾಡಿ ನಿವಾಸಿ ಜೇನು ಕುರುಬರ ದಾಸ (ಕೃಷ್ಣ-೫೨) ಗ್ರಾಮದ ಪ್ರಮುಖ ಮುಖಂಡನಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ.

(ಮೊದಲ ಪುಟದಿಂದ) ಇದರಿಂದ ಇಡೀ ಹಾಡಿಗೆ ದಾಸ ಅಗಲಿಕೆ ತೀವ್ರ ದುಃಖ ತರಿಸಿತ್ತು. ಸ್ಥಳೀಯರು ಆಕ್ರೋಶದ ಮಾತಿನ ಮೂಲಕ ತಮ್ಮ ನೋವನ್ನು ಅಧಿಕಾರಿಗಳ ಮುಂದೆ ತೋಡಿಕೊಂಡರು.

ಹುಲಿಯ ದಾಳಿಯಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ಹಸುವು ಮೃತಪಟ್ಟ ನಂತರ ಹಸುವನ್ನು ಹೂಳುವ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಲ್ಪ ಎಚ್ಚರಿಕೆ ವಹಿಸಿದ್ದಲ್ಲಿ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಬೇಜವಾಬ್ಧಾರಿತನದಿಂದ ಅಮಾಯಕ ಕಾರ್ಮಿಕ ಬಲಿಯಾಗಿದ್ದಾನೆ. ಆದ್ದರಿಂದ ಸಂಬAಧಿಸಿದ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಒತ್ತಾಯಿಸಿದರು.

ಮಧ್ಯರಾತ್ರಿ ವೇಳೆ ಮೃತ ಶರೀರವನ್ನು ಕಾನೂರು ಪಿ.ಎಚ್.ಸಿ.ಯಿಂದ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.

ಭಾನುವಾರ ಮುಂಜಾನೆಯ ೧೦ ಗಂಟೆಗೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.

ಶಾಸಕರ ಭೇಟಿ

ಮಾಹಿತಿ ತಿಳಿದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಬೊಮ್ಮಾಡು ಹಾಡಿಗೆ ತೆರಳಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ಹುಲಿಯನ್ನು ಹಿಡಿಯುವ ಸಲುವಾಗಿ ತಕ್ಷಣ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಈ ವೇಳೆ ಹಾಡಿಯ ಮುಖಂಡ ಜೇನುಕುರುಬರ ಸೋಮಯ್ಯ ಶಾಸಕರ ಬಳಿ ಹಾಡಿಯಲ್ಲಿ ವಾಸ ಮಾಡುತ್ತಿರುವ ಕುಟುಂಬಗಳ ಕಷ್ಟದ ಪರಿಸ್ಥಿತಿಯನ್ನು ತೋಡಿಕೊಂಡರು.

ಕಾAಗ್ರೆಸ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ, ಜಿಲ್ಲಾ ಡಿಸಿಸಿ ಅಧ್ಯಕ್ಷ ತೀತಿರ ಧರ್ಮಜ, ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಮೃತಪಟ್ಟ ದಾಸನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹುಲಿ ಸೆರೆಗೆ ಕ್ಯಾಮರ

ಆತಂಕ ಮೂಡಿಸಿರುವ ಹುಲಿಯ ಚಲನವಲನ ಪತ್ತೆಗೆ ಅರಣ್ಯ ಇಲಾಖೆ ಬೊಮ್ಮಾಡು ಹಾಡಿಯಲ್ಲಿ ಕ್ಯಾಮರಾವನ್ನು ಅಳವಡಿಸಿ ‘ಟೈಗರ್ ಟ್ರಾö್ಯಪ್’ಗೆ ಮುಂದಾಗಿದೆ.

ಈಗಾಗಲೇ ದಕ್ಷಿಣ ವಲಯದ ವಿವಿಧೆಡೆ ಹುಲಿ ಜಾನುವಾರುಗಳನ್ನು ಭಕ್ಷಿಸಿರುವ ಘಟನೆ ನಡೆದಿದೆ. ಇದೀಗ ಕಾನೂರು ವ್ಯಾಪ್ತಿಯಲ್ಲಿ ಮಾನವನ ಮೇಲೆ ದಾಳಿ ನಡೆಸಿರುವ ವ್ಯಾಘ್ರನ ಪತ್ತೆಗೆ ಅರಣ್ಯ ಇಲಾಖೆ ಮೊದಲ ಹಂತದಲ್ಲಿ ಕ್ಯಾಮರಾ ಅಳವಡಿಸಿ ಹುಲಿಯ ಗುರುತು ಪತ್ತೆಗೆ ಕ್ರಮ ಕೈಗೊಂಡಿದೆ.

-ಹೆಚ್.ಕೆ.ಜಗದೀಶ್