ವೀರಾಜಪೇಟೆ, ಸೆ. ೨೩: ವೀರಾಜಪೇಟೆ ಪಟ್ಟಣ ಪುರಸಭೆಗೆ ಅಕ್ಕ ಪಕ್ಕದ ಗ್ರಾಮ ಪಂಚಾಯಿತಿ ಸೇರಿದ ಬಡಾವಣೆಗಳಲ್ಲಿರುವ ಮನೆಗಳನ್ನು ಸೇರ್ಪಡೆಗೊಳಿಸಲು ಅಭಿವೃದ್ಧಿ ಶುಲ್ಕ ನಿಗದಿಪಡಿಸಲು ವಿಶೇಷ ಸಭೆ ಕರೆದು ತೀರ್ಮಾನಿಸು ವಂತೆ ಸಭೆ ನಿರ್ಣಯ ಕೈಗೊಂಡಿತು.

ಪುರಸಭೆ ಅಧ್ಯಕ್ಷೆ ಸುಶ್ಮಿತಾ ಅವರ ಅಧ್ಯಕತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಮಹಮದ್ ರಾಫಿ ಪ್ರಸ್ತಾಪಿಸಿ ಪಟ್ಟಣ ಪಂಚಾಯಿತಿ ಪುರಸಭೆ ಆದ ಮೇಲೆ ಅಕ್ಕ ಪಕ್ಕದ ಗ್ರಾಮ ಪಂಚಾಯಿತಿ ಸೇರಿದ ಬಡಾವಣೆಗಳಲ್ಲಿ ಇರುವ ಮನೆಗಳ ಸೇರ್ಪಡೆಗೊಳಿಸಲು ಅಭಿವೃದ್ಧಿ ಶುಲ್ಕ ಎಂದು ಸಾವಿರಾರು ರೂಗಳನ್ನು ವಸೂಲಿ ಮಾಡುತ್ತಿದ ಕಚೇರಿ ಸಿಬ್ಬಂದಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ. ಶುಲ್ಕ ಕಟ್ಟಲು ಬಂದವರಿಗೆ ಸದಸ್ಯರಿಗೆ ತಿಳಿಸುವುದು ಬೇಡ ಎಂದು ಹೇಳಿಕೆ ನೀಡುತ್ತಾರೆ. ಸಂವಿಧಾನಿಕ ಹುದ್ದೆ ಹೊಂದಿರುವುವರಿಗೆ ತಿಳಿಸುವುದು ಬೇಡ ಎಂದು ಸಿಬ್ಬಂದಿಗಳು ಹೇಳಿದರೆ ಅವರು ಸಾರ್ವಜನಿಕರಿಂದ ಎಷ್ಟು ಹಣ ಕೇಳಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕಾಗುತ್ತದೆ. ನೀವು ನಿಗದಿಪಡಿಸಿರುವ ಹಣ ದುಬಾರಿ ಆಗಿದೆ ಎಂದು ಸಭೆಗೆ ತಿಳಿಸಿದರು. ರಾಫಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಚಂದ್ರಕುಮಾರ್ ಪಟ್ಟಣದ ಅಭಿವೃದ್ಧಿ ದೃಷ್ಠಿಯಿಂದ ಶುಲ್ಕ ಕಟ್ಟಬೇಕಾಗುತ್ತದೆ. ಯಾವ್ಯಾವ ಸರ್ವೆ ಸಂಖ್ಯೆ ನಮ್ಮ ವ್ಯಾಪ್ತಿಗೆ ಸೇರುತ್ತದೆ ಎಂದು ಈಗಾಗಲೆ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿದೆ. ಉತ್ತರ ಬಂದ ನಂತರ ಅಭಿವೃದ್ಧಿ ಶುಲ್ಕ ನಿಗದಿ ಪಡಿಸಲಾಗುವುದು ಎಂದು ತಿಳಿಸಿದರು.

ಸದಸ್ಯ ರಾಜೇಶ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪ್ರಕೃತಿ ವಿಕೋಪ ಆಗುತ್ತಿದೆ. ಪಟ್ಟಣದಲ್ಲಿ ಎಷ್ಟು ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ ಪ್ರತಿಯ ಮಾಹಿತಿ ಕೊಡಿ ಎಂದು ಕೇಳಿದಾಗ ಅಭಿಯಂತರ ಹೇಮಕುಮಾರ್ ಮಾಹಿತಿ ನೀಡಿ ಜಿಲ್ಲೆಯ ಐದು ತಾಲೂಕಿನಲ್ಲಿ ೮೭ ಕೋಟಿ ನಷ್ಟ ಉಂಟಾಗಿದೆ. ಸರ್ಕಾರದ ಮಾನದಂಡದ ಪ್ರಕಾರ ಪಟ್ಟಣದಲ್ಲಿ ೩.೫ ಕೋಟಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಅವರ ಮಾಹಿತಿಯ ಚರ್ಚೆ ನಡೆದು ಪ್ರತಿ ವಾರ್ಡ್ನಲ್ಲಿ ಒಂದು ಕೋಟಿಗು ಅಧಿಕ ನಷ್ಟ ಉಂಟಾಗಿದೆ. ಒಟ್ಟು ೩೦ ಕೋಟಿ ಹಣ ಬೇಕು ಎಂದು ಮರು ಪ್ರಸ್ತಾವನೆ ಕಳುಹಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಪಟ್ಟಣದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟವಾಗುತ್ತಿದೆ. ಪಟ್ಟಣದಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುತ್ತಿದ್ದ ವರ್ತಕನಿಂದ ಪೊಲೀಸರು ೬ ಕೆ.ಜಿ. ಗಾಂಜಾ ವಶ ಪಡಿಸಿಕೊಂಡು ದಸ್ತಗಿರಿ ಮಾಡಿದ್ದಾರೆ. ಅವರ ಅಂಗಡಿ ಪರವಾನಿಗೆ ರದ್ದು ಮಾಡಬೇಕು. ಹೊರ ರಾಜ್ಯದಿಂದ ಬಂದು ಯಾರೆ ಅಂಗಡಿ ಮಳಿಗೆಗಳಿಗೆ ಪರವಾನಿಗೆ ಕೇಳಿದರೆ ಅವರ ಪೂರ್ವಪರ ವಿಚಾರಣೆ ನಡೆಸಿ ಲೈಸೆನ್ಸ್ ನೀಡಬೇಕು ಎಂದು ಸಭೆಗೆ ತಿಳಿಸಿದರು.

ದೇಚಮ್ಮ ಮಾತನಾಡಿ, ಮೊಗರ ಗಲ್ಲಿಯಲ್ಲಿ ೩೦ ಲಕ್ಷದ ತಡೆಗೋಡೆ ನಿರ್ಮಾಣ ಮಾಡಿದ ಸ್ಥಳದಲ್ಲಿ ಪುರಸಭೆಯ ಜಾಗ ಇದ್ದು ಅದನ್ನು ಸರ್ವೆ ನಡೆಸಿ ಜಾಗ ಒತ್ತುವರಿ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಳೆದ ಸಭೆಯಲ್ಲಿಯೆ ಪ್ರಸ್ತಾಪಿಸ ಲಾಗಿದೆ. ಆದರೆ ಈವರೆಗು ಕ್ರಮ ಕೈಗೊಂಡಿಲ್ಲ. ಮೊಗರಗಲ್ಲಿಗೆ ತೆರಳುವ ಕಟ್ಟಡದಲ್ಲಿ ಗೋದಾಮು ನಿರ್ಮಾಣಕ್ಕೆ ಪರವಾನಿಗೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗುವುದರಿಂದ ಪರವಾನಿಗೆ ರದ್ದು ಗೊಳಿಸಬೇಕು ಎಂದು ಹೇಳಿದರು. ಆಶಾ ಸುಬ್ಬಯ್ಯ ಮಾತನಾಡಿ, ವಿವಿಧ ವಿಚಾರ ಪ್ರಸ್ತಾಪಿಸಿದರು. ಸಿ.ಕೆ. ಪ್ರಥ್ವಿನಾಥ್ ಮಾತನಾಡಿ, ಸದಸ್ಯರು ಏನು ಮಾತನಾಡಿದರು ಅದು ನಿರ್ಣಯ ಪುಸ್ತಕದಲ್ಲಿ ಇರುವುದಿಲ್ಲ. ತಮಗಿಷ್ಟ ಬಂದ ರೀತಿಯಲ್ಲಿ ಸಿಬ್ಬಂದಿಗಳೂ ವರ್ತಿಸುತ್ತಿದ್ದಾರೆ. ಸದಸ್ಯರಿಗೆ ಗೌರವ ಕೊಡದ ಸಿಬ್ಬಂದಿಗಳು ವರ್ಗಾವಣೆ ಮಾಡಿಸಿಕೊಂಡು ಹೋಗಲಿ ಎಂದು ಹೇಳಿದರು. ವೇದಿಕೆಯಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರÀ ಹೇಮಕುಮಾರ್ ಉಪಸ್ಥಿತರಿದ್ದರು.