ಮಡಿಕೇರಿ, ಸೆ. ೧೯: ನಗರಸಭೆಯ ಅಧೀನದ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಅನೇಕ ಸಮಯದಿಂದ ಪಾವತಿಸದವರಿಗೆ ನಗರಸಭೆ ಅಧಿಕಾರಿಗಳು ಅಂಗಡಿಗೆ ಬೀಗ ಹಾಕಿ ಬಿಸಿ ಮುಟ್ಟಿಸಿದ್ದಾರೆ. .

ನಗರದ ೫ ಅಂಗಡಿಗಳಿಗೆ ತೆರಳಿದ ನಗರಸಭಾ ಅಧಿಕಾರಿಗಳು, ಸಿಬ್ಬಂದಿಗಳು ಬಾಡಿಗೆ ಪಾವತಿಯನ್ನು ಪ್ರಶ್ನಿಸಿ ಅಂಗಡಿಗೆ ಬೀಗ ಹಾಕಿದ್ದಾರೆ. ರೂ. ೩.೯೬ ಲಕ್ಷ ಬಾಕಿ ಇರಿಸಿದ್ದ ಪಿ.ಕೆ. ಲಕ್ಷಿö್ಮ, ೨.೮೦ ಲಕ್ಷ ಬಾಕಿ ಇಟ್ಟಿದ್ದ ಸಿ.ಜಿ.ಮೋಹನ್, ೧.೬೦ ಲಕ್ಷ ಬಾಕಿ ಉಳಿಸಿಕೊಂಡಿದ್ದ ಎಲ್.ಎಸ್.ವಿಶ್ವನಾಥ್, ೧.೯೦ ಲಕ್ಷ ಬಾಕಿ ಇದ್ದ ಬಿ.ಎಂ. ರಮೇಶ್, ೧.೮೩ ಲಕ್ಷ ಬಾಕಿ ಇಟ್ಟಿದ್ದ ಎಂ.ಬಿ. ಕೌಸರ್ ಅವರುಗಳ ಅಂಗಡಿಗಳನ್ನು ಮೊದಲ ಹಂತದಲ್ಲಿ ಬಂದ್ ಮಾಡಲಾಗಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ನಗರಸಭಾ ಪೌರಾಯುಕ್ತ ವಿಜಯ ಅವರು, ಬಾಡಿಗೆ ಪಾವತಿ ಮಾಡದ ಮೊದಲ ೫ ಅಂಗಡಿಗಳನ್ನು ಇದೀಗ ಬಂದ್ ಮಾಡಲಾಗಿದ್ದು, ೧ ಲಕ್ಷದ ಮೇಲೆ ಬಾಕಿ ಉಳಿಸಿಕೊಂಡವರು ಇನ್ನೂ ೧೩ ಮಂದಿ ಇದ್ದಾರೆ. ೫೦ ಸಾವಿರದಷ್ಟು ಬಾಕಿ ಉಳಿಸಿಕೊಂಡವರು ೨೫ಕ್ಕೂ ಹೆಚ್ಚಿನ ವರ್ತಕರಿದ್ದಾರೆ. ಇವರುಗಳು ಸಕಾಲದಲ್ಲಿ ಬಾಡಿಗೆ ಪಾವತಿಸದಿದ್ದಲ್ಲಿ ಅವರ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಸದ್ಯಕ್ಕೆ ೫ ಅಂಗಡಿಗಳಿಗೆ ಬೀಗ ಹಾಕಲಾಗಿದ್ದು, ಶೇ.೫೦ ಹಣ ಪಾವತಿಸಿ ನಿಗದಿತ ಸಮಯದಲ್ಲಿ ಬಾಕಿ ಹಣ ಪಾವತಿಸುತ್ತೇನೆ ಎಂದು ತಿಳಿಸಿದ್ದಲ್ಲಿ ಅಂಗಡಿ ತೆರೆಯಲು ಅವಕಾಶ ನೀಡಲಾಗುತ್ತದೆ. ಪಾವತಿಸದಿದ್ದಲ್ಲಿ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಒಂದು ವಾರದೊಳಗೆ ಬಾಕಿ ಹಣ ಉಳಿಸಿಕೊಂಡವರು ಶೇ.೫೦ ರಷ್ಟಾದರು ಹಣ ಪಾವತಿಸಬೇಕು. ಇಲ್ಲದಿದ್ದಲ್ಲಿ ಖಂಡಿತವಾಗಲು ಅಂಗಡಿ ಮುಚ್ಚುವ ಮೂಲಕ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ನಗರಸಭಾ ಸುಪರ್ಧಿಯಲ್ಲಿ ೧೦೨ ಮಳಿಗೆಗಳಿವೆ. ಎಲ್ಲರೂ ಸಕಾಲದಲ್ಲಿ ಬಾಡಿಗೆ ಪಾವತಿಸಬೇಕು ಎಂದು ವಿಜಯ ತಿಳಿಸಿದ್ದಾರೆ.