ಕರಿಕೆ, ಸೆ. ೧೯: ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಜಿಲ್ಲೆಯ ಹರಳು ಕಲ್ಲು ಗಣಿಗಾರಿಕೆಯ ಮೇಲೆ ನಿಗಾ ವಹಿಸಲು ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಅಭಯಾರಣ್ಯದ ಕೂಜಿಮಲೆ ವ್ಯಾಪ್ತಿಯಲ್ಲಿ ಕಣ್ಗಾವಲಿಗೆ ಸಿಸಿ ಕ್ಯಾಮರಾ ಹಾಗೂ ಕ್ಯಾಮರಾ ಟ್ರಾಪ್‌ಗಳನ್ನು ಅಳವಡಿಸಲಾಗಿದೆ.

ರಾಜ್ಯದಲ್ಲೇ ಕೆಂಪು ಹರಳು ಕಲ್ಲು ದೊರೆಯುವ ಸ್ಥಳ ಕೊಡಗಿನ ನಿಶಾನಿ ಬೆಟ್ಟ ಮತ್ತು ದ.ಕ. ಜಿಲ್ಲೆಯ ಕೂಜಿಮಲೆ ಎಂಬುದು ಬ್ರಿಟಿಷ್ ದಾಖಲೆಯಲ್ಲಿ ಉಲ್ಲೇಖವಿದೆ. ಭಾಗಮಂಡಲ-ಪಟ್ಟಿಘಾಟ್ ಮೀಸಲು ಅರಣ್ಯದ ನಿಶಾನಿ ಬೆಟ್ಟದಲ್ಲಿ ಹಲವು ವರ್ಷಗಳಿಂದ ನಿರಂತರ ಕೆಂಪು ಹರಳು ಕಲ್ಲು ಗಣಿಗಾರಿಕೆ ನಡೆದು ಕೆಲ ತಿಂಗಳ ಹಿಂದೆ ಸ್ಥಗಿತಗೊಂಡಿತ್ತು. ಇದಾದ ನಂತರ ಕೆಲ ತಿಂಗಳ ಹಿಂದೆ ಪುಷ್ಪಗಿರಿ ಅಭಯಾರಣ್ಯದಂಚಿನ ಮಂಗಳೂರು

ಅರಣ್ಯ ವಿಭಾಗಕ್ಕೆ ಸೇರಿದ ಕೂಜಿಮಲೆ ಸುಟ್ಟತ್ ಮಲೆ ಎಂಬಲ್ಲಿ

ನಿರಂತರ ಹರಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಅಲ್ಲಿನ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ.

(ಮೊದಲ ಪುಟದಿಂದ) ಕೂಜಿಮಲೆ ಪುಷ್ಪಗಿರಿ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಕೂಡ ಈ ಹರಳುಕಲ್ಲು ನಿಕ್ಷೇಪ ಇರುವುದರಿಂದ ಯಾವುದೇ ಗಣಿಗಾರಿಕೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಸಿಸಿ ಕ್ಯಾಮರಾ ಮತ್ತು ಹತ್ತು ಸ್ವಯಂ ಚಾಲಿತ ಕ್ಯಾಮರಾ ಟ್ರಾಪ್ ಅಳವಡಿಸಲಾಗಿದೆ. ಇದರ ನಿಯಂತ್ರಣ ಮಡಿಕೇರಿ ಅರಣ್ಯ ಭವನದಲ್ಲಿದೆ.

ಈ ಹಿಂದೆ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಅವರು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇಲ್ಲಿ ಕ್ಯಾಮರಾ ಅಳವಡಿಕೆಯ ಅಗತ್ಯವಿರುವುದನ್ನು ಮನಗೊಂಡು ಸಿಸಿ ಕ್ಯಾಮರಾ ಅಳವಡಿಸುವಂತೆ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದರು. ಇದೀಗ ಕೊಡಗಿನ ಎರಡು ಪ್ರಮುಖ ಕೆಂಪು ಹರಳುಕಲ್ಲು ನಿಕ್ಷೇಪಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಸಿಸಿ ಟಿವಿ ಅಳವಡಿಸಲಾಗಿದೆ.

-ಸುಧೀರ್ ಹೊದ್ದೆಟ್ಟಿ