ಕುಶಾಲನಗರ, ಸೆ. ೧೮: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸ್ಥಳೀಯ ಇಂಜಿನಿಯರಿAಗ್ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸಿದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಮಾತನಾಡಿ, ಇಂಜಿನಿಯರ್ಗಳು ದೇಶದ ಬೆನ್ನೆಲುಬು. ಅಂತಹ ಮಹಾನ್ ಮೇಧಾವಿ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ. ಅವರ ಜೀವಿತಾವಧಿಯ ಸಾಧನೆಗಳ ಫಲವೇ ದೇಶ ಇಂದು ಸುಭಿಕ್ಷವಾಗಿದೆ ಹಾಗೂ ಸುಭದ್ರವಾಗಿದೆ. ಅಂದು ಅವರು ರೂಪಿಸಿದ ಹಲವಾರು ಯೋಜನೆಗಳ ಫಲವನ್ನು ಇಂದು ನಾವೆಲ್ಲ ಪಡೆಯುತ್ತಿದ್ದೇವೆ ಎಂದರು.
ಸರ್ ಎಂ.ವಿಶ್ವೇಶ್ವರಯ್ಯ ಅವರ ಜೀವನ ಹಾಗೂ ಸಾಧನೆಗಳ ಕುರಿತು ಬ್ಯಾಂಕಿನ ನಿವೃತ್ತ ಅಧಿಕಾರಿ ಸೂದನ ರತ್ನಾವತಿ ಉಪನ್ಯಾಸ ನೀಡುತ್ತಾ, ದೇಶ ಹಾಗೂ ರಾಜ್ಯದ ಹೆಮ್ಮೆಯ ಪ್ರತೀಕವಾದ ಸರ್ ಎಂ.ವಿ. ಅವರ ಶ್ರಮದ ಫಲದಿಂದಾಗಿ ಕೊಡಗಿನ ಕಾವೇರಿ ನದಿಯ ಕೃಪೆಯಿಂದ ಮಂಡ್ಯ ಜಿಲ್ಲೆ ನಿತ್ಯವೂ ಹಸಿರಿನಿಂದ ಕಂಗೊಳಿಸುತ್ತಿದೆ. ನಾಡಿನ ಜ್ಞಾನ ದೇಗುಲವಾದ ಮೈಸೂರು ವಿಶ್ವ ವಿದ್ಯಾಲಯ ಹಾಗೂ ಕನ್ನಡ ನಾಡು ನುಡಿಯ ಅಸ್ಮಿತೆ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಹಿರಿಮೆ ಸರ್ ಎಂ.ವಿ. ಯವರದ್ದು ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿದರು. ಇದೇ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಭಿಯಂತರ ರಂಗರಾಜು ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಮೇಲ್ವಿಚಾರಕ ಹೆಚ್.ಎಸ್. ಮಧು, ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ನಾಗರಾಜು, ಎಂ.ಎನ್.ಕಾಳಪ್ಪ, ಟಿ.ಬಿ.ಮಂಜುನಾಥ, ಹೇಮಲತಾ, ಟಿ.ವಿ.ಶೈಲಾ, ಕಾಮಾಕ್ಷಿ ಬೋರೇಗೌಡ ಇದ್ದರು.
ವಸತಿ ನಿಲಯದ ವಿದ್ಯಾರ್ಥಿ ಯೋಗೇಶ್ ಸ್ವಾಗತಿಸಿ, ಪ್ರಶಾಂತ್ ನಿರೂಪಿಸಿ, ಅಭಿಷೇಕ್ ವಂದಿಸಿದರು.