ಸಿದ್ದಾಪುರ, ಸೆ. ೧೭: ಕಾರ್ಯಾಚರಣೆ ತಂಡದಿAದ ತಪ್ಪಿಸಿಕೊಂಡು ಹುಲಿಯು ಇದೀಗ ಮತ್ತೆ ಪ್ರತ್ಯಕ್ಷಗೊಂಡು ಜಾನುವಾರುವೊಂದರ ಮೇಲೆ ದಾಳಿ ನಡೆಸಿ ಕೊಂದಿರುವ ಘಟನೆ ಮಾಲ್ದಾರೆಯ್ಲ ಅಸ್ತಾನದಲ್ಲಿ ಶನಿವಾರ ಸಂಜೆ ನಡೆದಿದೆ. ಮಾಲ್ದಾರೆ ನಿವಾಸಿಯಾಗಿರುವ ಅಜಿನೀಕಂಡ ಮಾಚಯ್ಯ (ಸನ್ನಿ) ಎಂಬವರಿಗೆ ಸೇರಿದ ಎತ್ತುವಿನ ಮೇಲೆ ಹಾಡಹಗಲೇ ದಾಳಿ ನಡೆಸಿ ಸಾಯಿಸಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಹುಲಿಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖಾಧಿಕಾರಿಗಳು ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿದ್ದರು. ಈ ಸಂದರ್ಭ ಘಟ್ಟದಳ್ಳ ಸಮೀಪದ ಕಾಫಿ ತೋಟದೊಳಗಿನಿಂದ ಪರಾರಿಯಾಗಿ ಕಣ್ಮರೆಯಾಗಿದ್ದ ಹುಲಿಯು ಬಾಡಗ ಬಾಣಂಗಾಲ ಗ್ರಾಮದ ಖಾಸಗಿ ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಕಾಣಿಸಿಕೊಂಡಿದೆ. ಮಾಲ್ದಾರೆಯ ಅರಣ್ಯ ಪ್ರದೇಶದ ಸಮೀಪದಲ್ಲಿರುವ ಅಸ್ತಾನ ಗ್ರಾಮದಲ್ಲಿ ಹುಲಿ ಎತ್ತುವೊಂದರ ಮೇಲೆ ದಾಳಿ ನಡೆಸಿ ಕೊಂದಿದೆ. ಇದರಿಂದಾಗಿ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಸಿಲುಕಿದ್ದಾರೆ.
ಕಾರ್ಯಾಚರಣೆ ತಂಡಕ್ಕೆ ಸವಾಲು!
ಕಳೆದ ಒಂದು ವಾರದಲ್ಲಿ ನಾಲ್ಕು ಜಾನುವಾರುಗಳನ್ನು ಕೊಂದು ಹಾಕಿ ಅರವಳಿಕೆಗೂ ಸಿಗದೆ ಕಣ್ಮರೆಯಾಗಿ ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಹುಲಿಯ ಹಾವಳಿಯಿಂದಾಗಿ ಮಾಲ್ದಾರೆ ಹಾಗೂ ಬಾಡಗ ಬಾಣಂಗಾಲ ಗ್ರಾಮಸ್ಥರು, ಶಾಲಾ ಮಕ್ಕಳು, ಕಾರ್ಮಿಕರಲ್ಲಿ ಭಯದ ವಾತಾವರಣ ಮೂಡಿದೆ. ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ್ಳದಲ್ಲಿ ಕಳೆದ ಮೂರು ದಿನಗಳ ಹಿಂದೆ ಹಸುಗಳನ್ನು ಕೊಂದು ಹಾಕಿದ ಸ್ಥಳದಲ್ಲಿ ಹುಲಿಯ ಚಲನ - ವಲನ ಗಮನಿಸಲು ಹಸುವಿನ ಮೃತದೇಹದ ಬಳಿ ಮರದ ಮೇಲೆ ಅಟ್ಟಣಿ ನಿರ್ಮಿಸಲಾಗಿದ್ದು, ರಾತ್ರಿ ಪಾಳಿಯಲ್ಲಿ ಮೂರು ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ತಂಡವು ದಿನನಿತ್ಯ ಕಾಫಿ ತೋಟಗಳ ಒಳಗೆ ಸುತ್ತಾಡುತ್ತಿದ್ದರೂ, ಕಾರ್ಯಾಚರಣೆ ತಂಡಕ್ಕೆ ಹುಲಿ ಸಿಗುತ್ತಿಲ್ಲ. ಇದೀಗ ಮತ್ತೊಂದು ಎತ್ತುವನ್ನು ಬಲಿ ತೆಗೆದುಕೊಂಡಿರುವ ಘಟನೆಯಿಂದಾಗಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.
ಹುಲಿಯ ಸೆರೆಗೆ ಈಗಾಗಲೇ ಬೋನ್ ಇರಿಸಲಾಗಿದೆ ಹಾಗೂ ಸಿ.ಸಿ. ಕ್ಯಾಮರಾ ಅಳವಡಿಸಿ ನಿರಂತರ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ.ತಂಡ ತೊಡಗಿಸಿ ಕೊಂಡಿದೆ.
ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. -ವಾಸು.