ಗೋಣಿಕೊಪ್ಪ ವರದಿ, ಸೆ. ೧೫ : ಆರೋಗ್ಯಪೂರ್ಣ ವ್ಯಕ್ತಿಗೆ ಪೋಷಕಾಂಶ ಕಲ್ಪಿಸಲು ಅಣಬೆ ಆಹಾರ ಪದ್ಧತಿ ಅನುಸರಿಸಬೇಕು ಎಂದು ಚೆಟ್ಟಳ್ಳಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರಾಜೇಂದ್ರನ್ ಅಭಿಪ್ರಾಯಪಟ್ಟರು.
ಭಾರತೀಯ ತೋಟಗಾರಿಕಾ ಸಂಸ್ಥೆ, ಚೆಟ್ಟಳ್ಳಿ ಸಂಶೋಧನಾ ಕೇಂದ್ರ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಕೆವಿಕೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿಗೆ ಮಾಹಿತಿ ಮತ್ತು ಆರೋಗ್ಯ ಹೆಚ್ಚು ಉಪಯುಕ್ತ. ಉತ್ತಮ ಮಾಹಿತಿ ಕಲೆ ಹಾಕಿಕೊಂಡು ಆರೋಗ್ಯದ ಜೀವನ ಕಂಡುಕೊಳ್ಳಬೇಕಿದೆ. ಅಣಬೆಯಲ್ಲಿ ಪೋಷÀಕಾಂಶದ ಅಂಶ ಹೆಚ್ಚಿರುವುದರಿಂದ ಬೇಡಿಕೆ ಹೆಚ್ಚಿದೆ. ಸರಳ ಆಹಾರ ಪದ್ಧತಿಗೆ ಪೂರಕವಾಗಿರುವುದರಿಂದ ಆರೋಗ್ಯ ಪೂರಕ ಅಣಬೆ ಉತ್ಪಾದನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಮುಖ್ಯಸ್ಥ ಡಾ. ಕೆ.ಎ. ದೇವಯ್ಯ ಮಾತನಾಡಿ, ಒಂದು ತಿಂಗಳಲ್ಲಿ ೨ ಗಂಟೆ ಅವಧಿಯನ್ನು ಅಣಬೆ ಬೇಸಾಯಕ್ಕೆ ಮೀಸಲಿಡುವುದರಿಂದ ಆರ್ಥಿಕ ಸಬಲೀಕರಣಕ್ಕೆ ಅವಕಾಶ ತೆರೆದುಕೊಳ್ಳುತ್ತದೆ. ಕಡಿಮೆ ಸಮಯದ ಅವಧಿಯಲ್ಲಿ ಹೆಚ್ಚು ಉತ್ಪಾದನೆ, ಆರ್ಥಿಕ ಲಾಭಕ್ಕೆ ಅಣಬೆ ಬೇಸಾಯ ಪೂರಕವಾಗಿದೆ. ತಿಂಗಳು ಪೂರ್ತಿ ಅವಧಿಯ ೨ ಗಂಟೆಯನ್ನು ಮಾತ್ರ ಅಣಬೆ ಬಿತ್ತನೆ, ಕೊಯ್ಲುವರೆಗೆ ಮೀಸಲಿಡುವ ಪರಿಪಾಠ ಮಾಡಿಕೊಳ್ಳಬೇಕಿದೆ. ಇರುವ ಮೂಲಭೂತ ವ್ಯವಸ್ಥೆಯಲ್ಲಿ ಹೆಚ್ಚು ವೆಚ್ಚ ಇಲ್ಲದೆ ದುಪ್ಪಟ್ಟು ಲಾಭ ಕಂಡುಕೊಳ್ಳಬಹುದು. ಮಹಿಳೆಯರು ಹೆಚ್ಚಾಗಿ ಅಣಬೆ ಕೃಷಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಮಹಿಳೆಯರಲ್ಲಿ ಸ್ವಾವಲಂಭಿ ಬದುಕಿಗೆ ಕಾರ್ಯಾಗಾರ ಪ್ರಯೋಜನವಾಗುತ್ತಿದೆ. ಅಣಬೆ ಕೃಷಿಗೆ ಒತ್ತು ನೀಡುವುದು ಉತ್ತಮ ಎಂದರು.
ಅಣಬೆ ಬೇಸಾಯದ ಬಗ್ಗೆ ತೋಟಗಾರಿಕಾ ವಿಜ್ಞಾನಿ ಡಾ. ಬಿ. ಪ್ರಭಾಕರ್ ಸಲಹೆ ನಿಡಿದರು. ಮಾರುಕಟ್ಟೆ ವ್ಯವಸ್ಥೆ ಕೂಡ ಇರುವುದರಿಂದ ಉತ್ಪಾದನೆಗೆ ಒತ್ತು ನೀಡಬೇಕು. ಮೌಲ್ಯವರ್ಧನೆ ಮೂಲಕ ಆರ್ಥಿಕ ಲಾಭ ಕಂಡುಕೊಳ್ಳಬೇಕು ಎಂದರು.
ಅಣಬೆ ಬೀಜ ಉತ್ಪಾದನೆ ಬಗ್ಗೆ ಸಸ್ಯ ಸಂರಕ್ಷಣೆ ತಜ್ಞ ಡಾ. ಕೆ. ವಿ. ವೀರೇಂದ್ರಕುಮಾರ್ ಮಾಹಿತಿ ನೀಡಿದರು.
ನವೋಧ್ಯಮಿ ರಶ್ಮಿ ಭಾನುಪ್ರಕಾಶ್ ಅಣಬೆ ಮೌಲ್ಯವರ್ಧನೆ ಮೂಲಕ ಆರ್ಥಿಕ ಮಟ್ಟದ ಸುಧಾರಣೆ, ಅಣಬೆ ಉಪ್ಪಿನಕಾಯಿ, ಒಣಗಿಸಿದ ಅಣಬೆ, ಸೂಪ್ ತಯಾರಿಕೆ ಬಗ್ಗೆ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಅಣಬೆ ಕೃಷಿ ಬಗ್ಗೆ ವೀಣಾ ಮಾಹಿತಿ ನೀಡಿದರು. ಒಡಿಪಿ ಸಂಸ್ಥೆ ಸಂಚಾಲಕ ಧನುಕುಮಾರ್, ಇದ್ದರು.