ಮಡಿಕೇರಿ, ಸೆ. ೧೪: ಜಿಲ್ಲೆಯ ಪವಿತ್ರ ಕ್ಷೇತ್ರವಾಗಿರುವ ಭಾಗಮಂಡಲ ಶ್ರೀ ಭಗಂಡೇಶ್ವರ ಕ್ಷೇತ್ರದಲ್ಲಿ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮಕೈಗೊಳ್ಳುವದಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್‌ನ ಕಲಾಪದಲ್ಲಿ ಶೂನ್ಯವೇಳೆಯಲ್ಲಿ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ ಅವರು ಈ ಬಗ್ಗೆ ಪ್ರಸ್ತಾಪಿಸಿ ಭಾಗಮಂಡಲಕ್ಕೆ ಅಗತ್ಯ ವಿರುವ ಕೆಲಸಗಳ ಬಗ್ಗೆ ಗಮನ ಸೆಳೆದರು. ಯಾತ್ರಾರ್ಥಿಗಳು ಕಾವೇರಿಯ ಜನ್ಮಸ್ಥಳವಾದ ತಲಕಾವೇರಿಯೆಡೆಗೆ ಮುಂದುವರಿಯುವುದಕ್ಕೆ ಮುಂಚಿತವಾಗಿ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ತಮ್ಮ ಪೂರ್ವಜರ ಕುರಿತಾದ ಕರ್ಮಾಚರಣೆಗಳನ್ನು ನಿರ್ವಹಿಸುವುದು ಸಂಪ್ರದಾಯ. ಅಕ್ಟೋಬರ್ ತಿಂಗಳಿನಲ್ಲಿ ಬರುವ ತುಲಾ ಸಂಕ್ರಮಣದ ಸಂದರ್ಭದಲ್ಲಿ, ಯಾತ್ರಾರ್ಥಿಗಳು ಇಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜಮಾವಣೆಯಾಗುತ್ತಾರೆ. ಬೇಸಿಗೆ ಹಾಗೂ ಮಳೆಯಾಗುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳು ದೇವಾಲಯವನ್ನು ಪ್ರವೇಶ ಮಾಡುವ ಸಂದರ್ಭದಲ್ಲಿ ಮೇಲ್ಚಾವಣಿ ಇಲ್ಲದೇ ತೀವ್ರವಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ದೇವಾಲಯದ ಆವರಣದಲ್ಲಿ ಸುಸಜ್ಜಿತವಾದ ಪಾದಚಾರಿ ಮಾರ್ಗವೂ ಸಹ ಇರುವುದಿಲ್ಲ. ದಿನನಿತ್ಯ ಆಗಮಿಸುವ ಭಕ್ತರಿಗೆ ಭೋಜನವನ್ನು ಒದಗಿಸಲು ಒಂದು ಉತ್ತಮವಾದ ಭೋಜನ ಶಾಲೆ ಹಾಗೂ ಪಾಕಶಾಲೆಯೂ ಸಹ ಈ ದೇವಾಲಯಕ್ಕೆ ಅವಶ್ಯಕತೆ ಇದೆ.

ಅರ್ಧ ಕರ್ನಾಟಕಕ್ಕೆ ದಾಹವನ್ನು ತೀರಿಸುವ, ರೈತರ ಭೂಮಿಗಳಿಗೆ ಅನ್ನದಾತೆಯಾಗಿರುವ ತಲಕಾವೇರಿಯ ಜೀರ್ಣೋದ್ಧಾರಕ್ಕೆ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಮೇಲ್ಚಾವಣಿಗಳ ನಿರ್ಮಾಣ, ಸುಸಜ್ಜಿತವಾದ ಮೇಲ್ಚಾವಣಿ ಸಹಿತ ಪಾದಚಾರಿ ಮಾರ್ಗ, ಉತ್ತಮವಾದ ಭೋಜನ ಶಾಲೆ ಹಾಗೂ ಪಾಕಶಾಲೆಗಳನ್ನು ನಿರ್ಮಾಣ ಮಾಡಲು ಕೂಡಲೇ ಸರ್ಕಾರವು ಅನುದಾನವನ್ನು ಮಂಜೂರು ಮಾಡುವಂತೆ ಸುಜಾ ಮನವಿ ಮಾಡಿದರು.

ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಚಿವೆ ಶಶಿಕಲಾ ಜೊಲ್ಲೆ ಅವರು ಅಕ್ಟೋಬರ್‌ನಲ್ಲಿ ತುಲಾ ಸಂಕ್ರಮಣ ಸಂದರ್ಭ ಸಮಸ್ಯೆಯಾಗುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿಗಳನ್ನು ಪಡೆದು ಆದಷ್ಟು ಶೀಘ್ರದಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆಯಿತ್ತರು.