ಸಿದ್ದಾಪುರ, ಸೆ. ೧೪: ಹಾಡಹಗಲೇ ಹುಲಿಯು ಮತ್ತೊಂದು ಹಸುವಿನ ಮೇಲೆ ದಾಳಿ ನಡೆಸಿದೆ. ನಾಲ್ಕು ದಿನಗಳ ಒಳಗೆ ಮೂರು ಹಸುಗಳನ್ನು ಕೊಂದು ಹಾಕಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಹಾಡಹಗಲೇ ಬಾಡಗ ಬಾಣಂಗಾಲ ಗ್ರಾಮದ ಮಾರ್ಗೋಲ್ಲಿ ಕಾಫಿ ತೋಟದ ಬದಿಯಲ್ಲಿ ಮೇಯುತ್ತಿದ್ದ ಹಾಲು ಕರೆಯುವ ಹಸುವಿನ ಮೇಲೆ, ಮೇಯಿಸುತ್ತಿದ್ದ ಕಾರ್ಮಿಕನ ಎದುರಿನಲ್ಲೇ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿತ್ತು. ಇದೀಗ ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ್ಳದ ನಿವಾಸಿಯಾಗಿರುವ ಜಯಚಂದ್ರ ಎಂಬವರಿಗೆ ಸೇರಿದ ಹಸುವಿನ ಮೇಲೆ ಬುಧವಾರ ಸಂಜೆ ಅಂದಾಜು ೫ ಗಂಟೆಯ ಸಮಯದೊಳಗೆ ದಾಳಿ ನಡೆಸಿದೆ. ಘಟ್ಟದಳ್ಳದ ತಮಿಳು ಶಾಲೆಯ ಸಮೀಪದ ಸಾರ್ವಜನಿಕ ರಸ್ತೆಯ ಬದಿಯ ಕಾಫಿ ತೋಟದ ಬಳಿ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ಈ ಘಟನೆಯಿಂದ ಇದೀಗ ಕಾರ್ಯಾಚರಣೆ ತಂಡಕ್ಕೆ ಹುಲಿಯ ಉಪಟಳ ಸವಾಲಾಗಿ ಪರಿಣಮಿಸಿದೆ. ಜಯಚಂದ್ರ ಎಂಬವರಿಗೆೆ ಸೇರಿದ ಹಸುವೊಂದನ್ನು ಕಳೆದ ಎರಡು ದಿನಗಳ ಹಿಂದೆಯಷ್ಟೇ ಹುಲಿ ಕೊಂದಿತ್ತು. ಇದೀಗ ಇವರಿಗೆ ಸೇರಿದ ಎರಡನೇ ಹಸುವನ್ನು ಸಹ ಸಾಯಿಸಿದ್ದು, ನಷ್ಟ ಸಂಭವಿಸಿದೆ. ಹುಲಿಯು ಬಾಡಗ ಬಾಣಂಗಾಲ ಗ್ರಾಮದ ಕಾಫಿ

(ಮೊದಲ ಪುಟದಿಂದ) ತೋಟದೊಳಗೆ ಬೀಡುಬಿಟ್ಟು ಜಾನುವಾರುಗಳನ್ನು ಕೊಲ್ಲುತ್ತಿದ್ದು, ಕಾರ್ಯಾಚರಣೆ ತಂಡಕ್ಕೆ ಲಭಿಸುತ್ತಿಲ್ಲ. ಬುಧವಾರದಂದು ಕೂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರಿಸಿದ್ದರು. ಕಾರ್ಯಾಚರಣೆ ನಡೆಸುತ್ತಿದ್ದರೂ, ಹುಲಿಯು ಬೇರೆ ಸ್ಥಳಗಳಲ್ಲಿ ಪ್ರತ್ಯಕ್ಷಗೊಳ್ಳುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

-ವರದಿ : ವಾಸು