ಮಡಿಕೇರಿ, ಸೆ. ೧೪: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಈ ಬಾರಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಸುವ ನಿಟ್ಟಿನಲ್ಲಿ ದಸರಾ ಸಮಿತಿಯ ಪೂರ್ವಭಾವಿ ಸಭೆ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು.
ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನವರಾತ್ರಿ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು. ತಾ. ೨೬ ರಂದು ಕರಗ ಉತ್ಸವ ಆರಂಭವಾಗಲಿದ್ದು, ತಾ. ೨೭ ರಂದು ಗಾಂಧಿ ಮೈದಾನದ ಭವ್ಯವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ತಾ. ೩೦ ರಂದು ಮಹಿಳಾ ದಸರಾ, ಅ. ೧ ರಂದು ಯುವ ದಸರಾ, ೨ ರಂದು ಜಾನಪದ ಜಾತ್ರೆ, ೩ ರಂದು ಮಕ್ಕಳ ದಸರಾ, ೪ ರಂದು ಆಯುಧಪೂಜೆ ಹಾಗೂ ಕವಿಗೋಷ್ಠಿ, ೫ ರ ವಿಜಯದಶಮಿಯಂದು ರಾತ್ರಿ ೧೦ ಗಂಟೆಯ ನಂತರ ಮುಂಜಾನೆÀವರೆಗೆ ಸಂಗೀತ ರಸಮಂಜರಿಯನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿರುವುದಾಗಿ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ತೀರ್ಮಾನಿಸ ಲಾಯಿತು. ವಿಜಯದಶಮಿ ಹೊರತುಪಡಿಸಿ ಉಳಿದ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಧ್ವನಿವರ್ಧಕ ನಿರ್ಬಂಧದ ಹಿನ್ನೆಲೆಯಲ್ಲಿ ರಾತ್ರಿ ೧೦ ರಿಂದ ೧೦.೩೦ ರ ಒಳಗಾಗಿ ಮುಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ದಸರಾ ಉತ್ಸವದ ಉಪಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವುದರ ಜೊತೆಗೆ ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ದಸರಾ ಸಮಿತಿ ಉಪಾಧ್ಯಕ್ಷೆ, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಶ್ವೇತಾ ಪ್ರಶಾಂತ್, ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು. ಕಾನೆಹಿತ್ಲು ಮೊಣ್ಣಪ್ಪ ಸ್ವಾಗತಿಸಿ, ಡಿಶು ವಂದಿಸಿದರು.