ಮಡಿಕೇರಿ, ಸೆ. ೧೩: ಕೆಲವು ತಿಂಗಳ ಹಿಂದೆ ವಿಪರೀತ ಮಳೆಯಿಂದಾಗಿ ದಕ್ಷಿಣ ಕನ್ನಡ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿರುವ ಯು.ಪಿ. ರವೀಂದ್ರ ಅವರ ಮನೆಗೆ ಭೀಕರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ಹಾನಿಯಾಗಿದ್ದು, ದಿನ ಬಳಕೆಗೆ ಉಪಯೋಗ ಮಾಡುವಂತಹ ಕಟ್ಟಿಗೆ ಸಾಮಗ್ರಿಗಳು ಮತ್ತು ಇತರ ಸಾಮಗ್ರಿಗಳು ನೀರು ಪಾಲಾಗಿದೆ. ಈ ಮನೆಯವರಿಗೆ ಸಮೀಪದ ದಿ. ಎನ್.ಎಸ್. ದೇವಿಪ್ರಸಾದ್ ಅವರ ಮನೆಗೆ ತೆರಳುವ ರಸ್ತೆಯ ಹತ್ತಿರ ಇರುವ ಹೊಳೆಗೆ ಅಡ್ಡಲಾಗಿ ಸಂಪರ್ಕ ಕಾಲು ಸೇತುವೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಹಾದುಹೋಗಲು ಕಷ್ಟಕರವಾಗಿರುವುದರಿಂದ ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಯುವಕ ಸಂಘ ವತಿಯಿಂದ ನಡೆದಾಡಲು ಕಾಲು ಸೇತುವೆ ನಿರ್ಮಾಣ ಮಾಡಲಾಯಿತು. ಈ ಶ್ರಮದಾನ ಕಾರ್ಯದಲ್ಲಿ ಪಯಸ್ವಿನಿ ಯುವಕ ಸಂಘ ಸಂಪಾಜೆ ಕೊಡಗು ಇದರ ಹಿರಿಯ ಸದಸ್ಯರುಗಳು, ಸಂಘದ ಎಲ್ಲಾ ಸದಸ್ಯರುಗಳು ಹಾಗೂ ಯು.ಪಿ. ರವೀಂದ್ರ ಮತ್ತು ಮನೆಯವರು ಭಾಗವಹಿಸಿದ್ದರು.