ನಾಪೋಕ್ಲು, ಸೆ. ೧೨: ಸಮೀಪದ ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಮಕ್ಕಿ ಶ್ರೀ ಶಾಸ್ತಾವು ಸನ್ನಿಧಿಯಲ್ಲಿ ನೇತು ಹಾಕಿದ್ದ ಸುಮಾರು ೨೨ಕ್ಕೂ ಹೆಚ್ಚಿನ ಗಂಟೆಗಳನ್ನು ತಾ. ೧೧ರ ರಾತ್ರಿ ಕಳ್ಳರು ಅಪಹರಿಸಿರುವ ಘಟನೆ ನಡೆದಿದೆ. ೧೫, ೧೩, ೧೨, ೧೦, ೫ ಕೆ.ಜಿ ತೂಕದ ಗಂಟೆಗಳು ಸೇರಿದಂತೆ ಇನ್ನಿತರ ತಾಮ್ರದ ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
(ಮೊದಲ ಪುಟದಿಂದ) ಘಟನೆ ವಿವರ: ಪ್ರತೀ ದಿನದಂತೆ ತಾ. ೧೨ ರಂದು ಬೆಳಿಗ್ಗೆ ದೇವಳದ ಆವರಣ ಸ್ವಚ್ಛಗೊಳಿಸಲು ಆಗಮಿಸಿದ ಚಿಣ್ಣಪ್ಪ ಅವರಿಗೆ ಗಂಟೆ ಕಾಣೆಯಾಗಿರುವುದು ಗೋಚರಿಸಿದೆ. ಅವರು ಕೂಡಲೇ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟಿರ ಶ್ಯಾಮ್ ಚಿಣ್ಣಪ್ಪ ಅವರಿಗೆ ತಿಳಿಸಿದ್ದಾರೆ. ನಂತರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ದೇವಾಲಯ ಸುತ್ತ ಅಳವಡಿಸಲಾಗಿದ್ದ ೪ ಸಿಸಿ ಟಿವಿ ಕ್ಯಾಮರಾಗಳನ್ನು ಹಾನಿಗೊಳಿಸಿ, ಬೇರೆಡೆಗೆ ತಿರುಗಿಸಿ ಗಂಟೆ ಕಳ್ಳತನ ಮಾಡಿರುವದು ಕಂಡು ಬಂದಿದೆ.
ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಗೆ ದೇವಳದ ಆಡಳಿತ ಮಂಡಳಿ ದೂರು ನೀಡಿದ್ದು, ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಕೆ. ಸದಾಶಿವ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.