ಮಡಿಕೇರಿ, ಸೆ. ೭: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ತಾ. ೧೨ ಮತ್ತು ೧೩ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕೊಡಗು ಘಟಕದ ಅಧ್ಯಕ್ಷ ಕೆ.ಪಿ ಸೋಮಣ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸೈನಿಕರಿಗೆ ಸಿಗಬೇಕಿರುವ ಸವಲತ್ತಿಗಾಗಿ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದಿಂದ ಸೂಕ್ತ ಸ್ಪಂದನ ಸಿಗದೆ ಅನ್ಯಾಯವಾಗುತ್ತಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೊಡಗಿನಿಂದಲೂ ಎಲ್ಲಾ ತಾಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ತಮ್ಮ ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡಿದ ಮಾಜಿ ಯೋಧರು ಬೀದಿಗಿಳಿಯುವಂತಾಗಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳ ನಿರ್ಲಕ್ಷö್ಯದಿಂದ ಮಾಜಿ ಸೈನಿಕರಿಗೆ ನಿವೇಶನ ಸಿಗುತ್ತಿಲ್ಲ. ಸರ್ಕಾರಿ ನೌಕರಿಯಲ್ಲಿ ಮಾಜಿ ಸೈನಿಕರಿಗೆ ಶೇ.೧೦ರಷ್ಟು ಮೀಸಲಾತಿ ಇದ್ದರೂ ಇದುವರೆಗೂ ಸಿಗಲಿಲ್ಲ. ಮಾಜಿ ಸೈನಿಕರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು. ಆವಾಜ್ ಯೋಜನೆಯಲ್ಲಿ ಮನೆ ಮಂಜೂರು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಪ್ರತಿಭಟಿಸಲಾಗುವುದು ಎಂದರು.

ಕುಶಾಲನಗರ ತಾಲೂಕು ಸಂಚಾಲಕ ಪಿ.ಎಸ್. ವಾಸು ಮಾತನಾಡಿ, ನಿವೇಶನಕ್ಕಾಗಿ ಮಾಜಿ ಸೈನಿಕರಿಂದ ೩,೦೬೧ ಅರ್ಜಿಗಳು ಬಂದಿದ್ದು, ಜಿಲ್ಲಾಡಳಿತ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೈನಿಕ ಭವನಕ್ಕೆ ಸ್ಥಳ ಗುರುತಿಸುವುದಾಗಿ ನೀಡಿದ್ದ ಭರವಸೆಯೂ ಹುಸಿಯಾಗಿದೆ. ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವAತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬೈತಡ್ಕ ಬೆಳ್ಯಪ್ಪ, ಟಿ.ಕೆ ಕಾಳಪ್ಪ, ಬೊಟ್ಟಂಗಡ ಜಪ್ಪು, ಕರ್ತಂಡ ಚಂದನ ಹಾಜರಿದ್ದರು.