ಶನಿವಾರಸಂತೆ, ಸೆ. ೭: ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸಂಘಟಿತರಾಗಿ ಹೋರಾಟ ಮಾಡಲು ಬೆಳೆಗಾರರು ಕರ್ನಾಟಕ ಗ್ರೋವರ್ಸ್ ಫೆಡರೇಷನ್ (ಕೆಜಿಎಫ್) ಜೊತೆ ಕೈ ಜೋಡಿಸಬೇಕು ಎಂದು ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಡಾ. ಎಚ್.ಟಿ. ಮೋಹನ್ ಕುಮಾರ್ ಕರೆ ನೀಡಿದರು.

ಸಮೀಪದ ಕೊಡ್ಲಿಪೇಟೆಯ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹೋಬಳಿ ಬೆಳೆಗಾರರ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿವೃಷ್ಠಿಯಲ್ಲಿ ಬೆಳೆ ಹಾನಿಗೆ ಕೆಜಿಎಫ್ ಎನ್.ಡಿ.ಆರ್.ಎಫ್.ನಡಿ ೧ ಹೆಕ್ಟೇರ್‌ಗೆ ನೀಡುತ್ತಿರುವ ೫೬ ಸಾವಿರ ಪರಿಹಾರ ಸಾಕಾಗುವುದಿಲ್ಲ. ಪರಿಷ್ಕರಣೆ ಮಾಡಲು ಹೋರಾಟ ರೂಪಿಸಲಾಗಿದೆ. ೧೦ ಎಚ್.ಪಿ.ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಹಾಗೂ ವನ್ಯಮೃಗಗಳ ಹಾವಳಿ ಸೇರಿದಂತೆ ಬೆಳೆಗಾರರ ಸಮಸ್ಯೆಗಳ ಕುರಿತು ಹೋರಾಟ ನಡೆದಿದೆ. ಸಂಘಟನೆಯಿAದ ಯಶಸ್ಸು ಸಾಧ್ಯವಾದ್ದರಿಂದ ಬೆಳೆಗಾರರು ಸಂಘಟಿತರಾಗಬೇಕು ಎಂದರು.

ಕೆಜಿಎಫ್‌ನ ಹೋರಾಟದ ಫಲವಾಗಿ ಭೂ ಕಬಳಿಕೆ ಕಾಯ್ದೆಯಲ್ಲಿ ಮಾರ್ಪಾಡು ಮಾಡಲು ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಣಯಿಸಿ ಘೋಷಣೆ ಮಾಡಿದ್ದು, ಭೂ ಒತ್ತುವರಿದಾರರು ಅನುಭವಿಸುತ್ತಿರುವಂತಹ ಸಂಕಷ್ಟ ನಿವಾರಣೆಯಾಗಿ ಬೆಳೆಗಾರರು ನಿರಾಳರಾಗಿದ್ದಾರೆ ಎಂದರು.

ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ಮಾತನಾಡಿ, ಕಾಡಾನೆ ಹಾವಳಿಯಿಂದ ಬೆಳೆಗಾರರು ಕಂಗಾಲಾಗಿದ್ದು, ಅವುಗಳನ್ನು ಆಯಾ ಜಿಲ್ಲೆಗಳ ಅಭಯಾರಣ್ಯಗಳಿಗೆ ಸ್ಥಳಾಂತರ ಮಾಡಬೇಕು. ಕೊಡಗು - ಹಾಸನ- ಚಿಕ್ಕಮಗಳೂರು ಜಿಲ್ಲೆಗಳ ಬೆಳೆಗಾರರು ಸಂಘಟಿತರಾಗಬೇಕು ಎಂದರು.

ಕೆಜಿಎಫ್ ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್, ಬೆಳೆಗಾರ ಪತ್ರಿಕೆಯ ಮುಖ್ಯ ಸಂಪಾದಕ ಟಿ.ಪಿ. ಸುರೇಂದ್ರ, ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿದರು.

ಕೆಜಿಎಫ್‌ನ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಹಿರಿಯ ಸಹಕಾರಿ ಬಿ.ಕೆ. ಚಿಣ್ಣಪ್ಪ, ಪ್ರಮುಖರಾದ ಬಾಬು ರಾಜೇಂದ್ರ ಪ್ರಸಾದ್, ಡಿ. ಭಗವಾನ್ ಗೌಡ, ವಿ.ಎಸ್.ಎಸ್.ಎನ್. ಅಧ್ಯಕ್ಷ ಎಸ್.ಡಿ. ತಮ್ಮಯ್ಯ, ಕಾಮಧೇನು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ರೇಣುಕ, ಶನಿವಾರಸಂತೆ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷö್ಮಣ್, ಯಸಳೂರು ಸಂಘದ ಅಧ್ಯಕ್ಷ ರಾಮಚಂದ್ರ, ಬೆಳೆಗಾರರಾದ ಇಕ್ಬಾಲ್ ಹುಸೇನ್, ಎಚ್.ಎಂ. ರಾಜಶೇಖರ್, ಕೆ.ಎನ್. ವಸಂತ್, ಬಿ.ಕೆ. ಯತೀಶ್ ಉಪಸ್ಥಿತರಿದ್ದರು.