ಮಡಿಕೇರಿ, ಸೆ. ೭: ವಾಲ್ನೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ತೋಟಗಳಲ್ಲಿ ದಾಂಧಲೆ ನಡೆಸುತ್ತಿರುವ ಕಾಡಾನೆಗಳಿಂದ ಅಪಾರ ನಷ್ಟ ಉಂಟಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಬೆಳೆಗಾರರಿಗೆ ಪರಿಹಾರ ಮರೀಚಿಕೆಯಾಗಿದೆ.
ನಿತ್ಯ ತೋಟಗಳಲ್ಲೇ ಇರುವ ಕಾಡಾನೆಗಳು ಕಾಫಿ ಮತ್ತು ಅಡಿಕೆ ತೋಟವನ್ನು ನಾಶ ಮಾಡುತ್ತಿವೆ. ಇತ್ತೀಚೆಗೆ ಬೆಳೆಗಾರ ಭುವನೇಂದ್ರ ಅವರ ತೋಟಕ್ಕೆ ಲಗ್ಗೆ ಇಟ್ಟ ಆನೆಗಳು ಅಡಿಕೆ ಮರ, ಗಿಡಗಳನ್ನು ಸಂಪೂರ್ಣವಾಗಿ ನೆಲಕಚ್ಚಿಸಿವೆ. ಅಪಾರ ನಷ್ಟ ಅನುಭವಿಸುತ್ತಿರುವ ಭುವನೇಂದ್ರ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಎಸಿಎಫ್ ಗೋಪಾಲ, ರೇಂಜರ್ ಶಿವರಾಮ್ ಹಾಗೂ ಮೀನುಕೊಲ್ಲಿ ಅರಣ್ಯಾಧಿಕಾರಿ ಕೋಡಕಂಡಿ ಸುಬ್ರಾಯ ಭೇಟಿ ನೀಡಿ ಪರಿಶೀಲಿಸಿದರು. ಕಾಡಾನೆ ಬಾರದಂತೆ ತಡೆಯಲು ನಿರ್ಮಿಸಿರುವ ರೈಲ್ವೆ ಕಂಬಿಗಳ ಬೇಲಿಯನ್ನು ಕೂಡ ವೀಕ್ಷಿಸಿದ ಅವರು, ಎರಡು ಕಂಬಿಗಳಿಗೆ ಸೀಮಿತವಾಗಿರುವ ಬೇಲಿಗೆ ಮತ್ತೊಂದು ಕಂಬಿ ಅಳವಡಿಸಲು ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ವಾಲ್ನೂರು, ನಂಜರಾಯಪಟ್ಟಣ ಭಾಗದ ವಿವಿಧ ಗ್ರಾಮಗಳ ಬೆಳೆಗಾರರು ಕಾಡಾನೆಯಿಂದಾದ ನಷ್ಟ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಒಂದು ವರ್ಷವೇ ಕಳೆದಿದ್ದರೂ ಇಲ್ಲಿಯವರೆಗೆ ಪರಿಹಾರ ಬಿಡುಗಡೆಯಾಗಿಲ್ಲ. ಕೈಗೆ ಬಂದ ಫಸಲು ಬಾಯಿಗೆ ಬಾರದ ಸ್ಥಿತಿಯಲ್ಲಿರುವ ಕೃಷಿಕ ವರ್ಗ ಪರಿಹಾರದ ಹಣವೂ ದೊರೆಯದೆ ಕಂಗಾಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಬೆಳೆಗಾರರ ನೆರವಿಗೆ ಬಂದು ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.