ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರ್ಗಾಣೆ ಗ್ರಾಮದ ಚೆಟ್ಟಳ್ಳಿ ರಸ್ತೆಯಲ್ಲಿರುವ ಶ್ರೀದೇವಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಮೂರ್ತಿಯನ್ನು ಅಣ್ಣಪ್ಪ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ಅರ್ಚಕ ಕೆದಕಲ್ನ ಅವಿನಾಶ ಅವರ ತಂಡದವರು ಗಣಹೋಮದೊಂದಿಗೆ ವಿವಿಧ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಶ್ರೀ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ವಿನುಕುಮಾರ್,ಕಾರ್ಯದರ್ಶಿ ವಿನೀತ್ ಖಜಾಂಚಿ ಶಿವಪ್ರಸಾದ್ ರೈ, ಮೊದಲಾದವರು ಉಪಸ್ಥಿತರಿದ್ದರು.
ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಯಿತು.ಕಡಂಗ: ಅರಪಟ್ಟು ಕಡಂಗ ಮುಖ್ಯ ರಸ್ತೆಯಲ್ಲಿರುವ ಶ್ರೀ ಬಲಮುರಿ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ೩೧ನೇ ವರ್ಷದ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು.
ಗಂಟೆಗೆ ಗಣಪತಿ ಹೋಮ, ಗಣಪತಿ ಮೂರ್ತಿಯ ಪ್ರತಿಷ್ಠಾಪನಾ ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಪೂಜಾ ಕಾರ್ಯಕ್ರಮವನ್ನು ಅರ್ಚಕ ವಿದ್ಯಾಧರ್ ಅವರ ಮುಂದಾಳತ್ವದಲ್ಲಿ ನಡೆಸಲಾಯಿತು. ಈ ಸಂದರ್ಭ ಸಮಿತಿ ಅಧ್ಯಕ್ಷ ಕೋಡಿರ ಪೃಥ್ವಿ ಮಂದಣ್ಣ, ಕಾರ್ಯದರ್ಶಿಗಳಾದ ಸಾಬಾ ಕರುಂಬಯ್ಯ, ಪ್ರಮುಖರಾದ ಪ್ರಸನ್ನ ತಮ್ಮಯ್ಯ, ಪ್ರಕಾಶ್ ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ಕೂಡಿಗೆ ಡೈರಿ: ಕೂಡಿಗೆ ಡೈರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ವರ್ಷಂಪ್ರತಿಯAತೆ ಈ ಬಾರಿ ಡೈರಿ ಆವರಣದಲ್ಲಿ ಮಂಟಪದಲ್ಲಿ ಗಣಪತಿ ಮತ್ತು ಗೌರಿ ವಿಗ್ರಹವನ್ನು ಕುಳ್ಳಿರಿಸಿ ವಿಶೇಷ ಪೂಜೆ, ಹೋಮಗಳನ್ನು ನೆರವೇರಿಸಿದರು.
ಈ ಸಂದರ್ಭ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್, ಡೈರಿ ವ್ಯವಸ್ಥಾಪಕ ನಂದೀಶ್, ಸಹಾಯ ವ್ಯವಸ್ಥಾಪಕ ಅನಿಲ್, ಮಾರುಕಟ್ಟೆ ವ್ಯವಸ್ಥಾಪಕ ಮಲ್ಲೇಶ್ ಸೇರಿದಂತೆ ಅಧಿಕಾರಿ ವರ್ಗದವರು ಮತ್ತು ಕಾರ್ಮಿಕ ವೃಂದದವರು ಹಾಜರಿದ್ದರು.ಚೆಯ್ಯಂಡಾಣೆ: ಸ್ಥಳೀಯ ಗಣೇಶ ಸೇವಾ ಸಮಿತಿಯ ವತಿಯಿಂದ ಲಕ್ಷಿö್ಮ ಮಹಿಳಾ ಸಮಾಜದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಶ್ರೀ ಗೌರಿ ಗಣೇಶೋತ್ಸವ ವಿಜೃಂಭಣೆಯಿAದ ನಡೆಯಿತು.
ಬೆಳಿಗ್ಗೆ ೬ ಗಂಟೆಗೆ ಶ್ರೀ ಗಣಪತಿ ಹೋಮ, ನಂತರ ಗೌರಿ ಮತ್ತು ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರದಿದ್ದ ಭಕ್ತಾದಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಮಧ್ಯಾಹ್ನದ ನಂತರ ಮಹಾಗಣಪತಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಕರಡ ಹೊಳೆಯಲ್ಲಿ ವಿಸರ್ಜಿಸಲಾಯಿತು.ಕರಿಕೆ: ಕರಿಕೆ ಗ್ರಾಮದಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಚೆತ್ತುಕಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೪೨ನೇ ವರ್ಷದ ಗಣೇಶೋತ್ಸವವನ್ನು ಹಳೆ ವಿದ್ಯಾರ್ಥಿ ಸಂಘವು ಆಚರಿಸಿತು.
ಎಳ್ಳುಕೊಚ್ಚಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಈ ಬಾರಿ ಪ್ರಥಮ ವರ್ಷದ ಗಣೇಶೋತ್ಸವ ಆಚರಿಸಲಾಯಿತು. ವಿವಿಧ ಭಜನಾ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.ಚೆಟ್ಟಳ್ಳಿ: ಚೆಟ್ಟಳ್ಳಿಯ ವೀರಾಂಜನೇಯ ಯುವಕ ಸಂಘದ ವತಿಯಿಂದ ಚೆಟ್ಟಳ್ಳಿ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಗೌರಿ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪೂರ್ವಾಹ್ನ ೮ ಗಂಟೆಗೆ ವಿಘ್ನೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅರ್ಚಕರಿಂದ ಗಣಪತಿ ಹೋಮ ನೆರವೇರಿಸಿ ಭಕ್ತಾದಿಗಳಿಂದ ಪೂಜೆ ಸಮರ್ಪಿಸಲಾಯಿತು. ಪ್ರಸಾದ ವಿತರಣೆ ಮಧ್ಯಾಹ್ನ ಅನ್ನದಾನ ನೆರವೇರಿಸಲಾಯಿತು.
ಸಂಜೆ ೪ ಗಂಟೆಗೆ ಗೌರಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಯೊಂದಿಗೆ ಚೆಟ್ಟಳ್ಳಿ ಪಟ್ಟಣದುದ್ದಕ್ಕೂ ತೆರಳಿ ಗೌರಿ-ಗಣೇಶೋತ್ಸವ ಮೂರ್ತಿಯನ್ನು ಪೊನ್ನತಮೊಟ್ಟೆಯ ಹೊಳೆಯಲ್ಲಿ ವಿಸರ್ಜಿಸಲಾಯಿತು. ಸಂಘದ ವತಿಯಿಂದ ರಾತ್ರಿ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.