ಸಿದ್ದಾಪುರ, ಸೆ. ೬: ಬೆಲೆ ಏರಿಕೆ ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿರುವಾಗ ಬಡವರಿಗೆ ಆಸರೆಯಾಗುವ ಅನ್ನಭಾಗ್ಯ ಯೋಜನೆಯನ್ನು ಕಡಿಮೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ ಎಂದು ಸಿಪಿಐ ರಾಜ್ಯ ಸಮಿತಿ ಸದಸ್ಯ ಗುಣಶೇಖರ್ ಹೇಳಿದರು.

ನಗರದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ ಮೂರನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ಕಂಗಾಲಾಗಿರುವ ಸಂದರ್ಭದಲ್ಲಿ ಬಡ ಮಧ್ಯಮ ವರ್ಗದ ಜನರ ಬದುಕು ಕಷ್ಟವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ಜೀವದೊಡನೆ ಚೆಲ್ಲಾಟ ಆಡುತ್ತಿದೆ ಎಂದು ದೂರಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಶಾಶ್ವತ ಸೂರು ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ಈ ಸಂದರ್ಭ ನೂತನವಾಗಿ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ವಿ. ಸುನಿಲ್ ಆಯ್ಕೆಯಾದರು. ಸಹಕಾರ್ಯದರ್ಶಿಗಳಾಗಿ ರಮೇಶ್ ಮಾಯಮುಡಿ, ರಫೀಕ್ ನವಲಗುಂದ, ಹೆಚ್.ಎಮ್. ಸೋಮಪ್ಪ ಹಾಗೂ ಶಾಂತಿ ಇವರನ್ನು ಆಯ್ಕೆ ಮಾಡಲಾಯಿತು. ಖಜಾಂಚಿಯಾಗಿ ಎನ್. ಮಣಿ ಆಯ್ಕೆಯಾದರು. ಈ ಸಂದರ್ಭ ಎಲಿಜಬೆತ್, ರಾಜು, ಬೇಬಿ, ಸಬಾನ, ತಿಮ್ಮ, ರಘು, ಸೀತಾರಾಮ್, ಮಣಿ, ಪ್ರಕಾಶ್, ಎಂ.ಎ. ಕೃಷ್ಣ, ಗಣೇಶ ಪಿ.ಕೆ, ಬಾಬು, ರವಿ, ಕರ್ಪಸ್ವಾಮಿ ಮುಂತಾದವರು ಹಾಜರಿದ್ದರು.