ಕುಶಾಲನಗರ, ಸೆ.೫: ಕುಶಾಲನಗರ ಪಟ್ಟಣದ ಬೈಚನಹಳ್ಳಿ ಬಳಿ ಮೊಬೈಲ್ ಟವರ್ ಅಡಿಪಾಯ ಕುಸಿದಿದ್ದು, ಈ ವ್ಯಾಪ್ತಿಯಲ್ಲಿ ನಾಗರಿಕರು ಭೀತಿ ನಡುವೆ ದಿನದೂಡುವಂತಾಗಿದೆ.
ಇತ್ತೀಚೆಗೆ ಸುರಿದ ಭಾರಿ ಪ್ರಮಾಣದ ಮಳೆಯಿಂದ ಟವರ್ ಕೆಳಭಾಗದ ಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು, ಯಾವುದೇ ಸಂದರ್ಭದಲ್ಲಿ ಟವರ್ ನೆಲ ಕಚ್ಚುವ ಸಾಧ್ಯತೆ ಇರುವುದಾಗಿ ಸ್ಥಳೀಯರು ದೂರಿದ್ದಾರೆ.
ಬೈಚನಹಳ್ಳಿ ಮುಖ್ಯರಸ್ತೆ ಬಳಿಯಲ್ಲಿರುವ ಚಲನಚಿತ್ರ ಮಂದಿರದ ಹಿಂಭಾಗದಲ್ಲಿರುವ ಮೊಬೈಲ್ ಗೋಪುರ ಕುಸಿದು ಬಿದ್ದಲ್ಲಿ ಭಾರೀ ಪ್ರಮಾಣದ ಅನಾಹುತ ಉಂಟಾಗಲಿದೆ ಎಂದು ಇಲ್ಲಿನ ನಿವಾಸಿ ಎ.ಎ. ಚಂಗಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ದಿನನಿತ್ಯ ನೂರಾರು ಜನರು ಈ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದು, ಅಪಾಯದ ಸನ್ನಿವೇಶ ಸೃಷ್ಟಿಯಾಗಿದೆ. ಕೂಡಲೇ ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಲು ಟವರ್ ಮಾಲೀಕರಿಗೆ ಸೂಚನೆ ನೀಡುವಂತೆ ಆಗ್ರಹಿಸಿದ್ದಾರೆ.
ಈ ಸಂಬAಧ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಸ್ಥಳೀಯ ನಿವಾಸಿ ಅರ್ಜುನ್ ತಿಳಿಸಿದ್ದು, ಅಪಾಯ ಉಂಟಾಗುವ ಮೊದಲೇ ಎಚ್ಚೆತ್ತುಕೊಳ್ಳುವಂತೆ ಕೋರಿದ್ದಾರೆ.