ಕುಶಾಲನಗರ, ಸೆ. ೫: ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಡು, ಕುರಿ ಮಾಂಸ ಮಾರಾಟದ ಹಕ್ಕು ನೀಡಲು ಪಂಚಾಯಿತಿ ವತಿಯಿಂದ ಟೆಂಡರ್ ಕರೆಯುವ ನಿರ್ಣಯದ ಬಗ್ಗೆ ಮಾಂಸ ವ್ಯಾಪಾರಿಗಳ ಸಂಘದ ಪ್ರಮುಖರು ವಿರೋಧಿಸಿದ್ದು, ಕೂಡಲೇ ನಿರ್ಣಯ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

ಇತ್ತೀಚೆಗೆ ನಡೆದ ಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ಹಲವರ ವಿರೋಧವಿದ್ದರೂ, ಕೆಲವು ಸದಸ್ಯರು ಮಾಂಸ ಮಾರಾಟ ಹಕ್ಕು ನೀಡುವ ಬಗ್ಗೆ ನಿರ್ಣಯಕೈಗೊಂಡಿದ್ದು, ಟೆಂಡರ್ ಕರೆಯಲು ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದು ಮಾಂಸ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ೧೦ ವರ್ಷಗಳಿಂದ ಕೊಪ್ಪ ಗ್ರಾಮದಲ್ಲಿ ಪಂಚಾಯಿತಿ ಮೂಲಕ ಲೈಸನ್ಸ್ ಆಧಾರದಲ್ಲಿ ಆಡು, ಕುರಿ, ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿದ್ದು, ಇದೀಗ ಏಕಾಏಕಿ ಪಂಚಾಯಿತಿ ಆಡಳಿತ ಮಂಡಳಿ ತುರ್ತು ಸಭೆ ಕರೆದು ಟೆಂಡರ್ ಕರೆಯಲು ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂದು ಸಂಘದ ಅಧ್ಯಕ್ಷ ಮೀರಾ ಮೊಹಿದ್ದಿನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಿಯಮಾನುಸಾರ ಲೈಸನ್ಸ್ ಪಡೆದ ಹಲವು ಅಂಗಡಿಗಳ ಮಾಲೀಕರು ಲಕ್ಷಾಂತರ ರೂ. ಮುಂಗಡ ನೀಡಿ ಕಟ್ಟಡಗಳನ್ನು ಬಾಡಿಗೆಗೆ ಪಡೆದು ಮಾಂಸ ವ್ಯಾಪಾರ ಮಾಡುತ್ತಿದ್ದು, ಜೊತೆಗೆ ಅಂಗಡಿಗಳಲ್ಲಿ ಸಹಾಯಕರನ್ನು ನೇಮಿಸಿಕೊಳ್ಳಲಾಗಿದೆ. ಸುಮಾರು ೫೦ಕ್ಕೂ ಅಧಿಕ ಮಂದಿ ಕಾರ್ಮಿಕರು ಬೀದಿ ಪಾಲಾಗುವ ನಡುವೆ ಮಾಲೀಕರು ನಷ್ಟಕ್ಕೆ ಒಳಗಾಗಲಿದ್ದಾರೆ ಎಂದು ತಿಳಿಸಿರುವ ಸಂಘದ ಉಪಾಧ್ಯಕ್ಷ ಬಷೀರ್, ತಕ್ಷಣ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭ ಸಂಘದ ಪ್ರಮುಖರಾದ ಜಬಿಉಲ್ಲಾ, ವಿನೋದ್‌ಕುಮಾರ್, ಅಸ್ಲಾಂ ಪಾಷಾ, ಖಾದರ್ ಇದ್ದರು.