ಕುಶಾಲನಗರ, ಸೆ. ೫: ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿ ಐಎಎಸ್ ಅಧಿಕಾರಿ ಎಸ್.ಎಸ್ ನಕುಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಕುಶಾಲನಗರ ರೋಟರಿ ಸಹಯೋಗ ದೊಂದಿಗೆ ಸರ್ಕಾರಿ ಇಂಜಿನಿಯ ರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರು ಸ್ವಂತಿಕೆ ಬೆಳೆಸಿಕೊಳ್ಳಬೇಕು, ಮಾತನಾಡಲು ಹಿಂಜರಿಕೆ ಸಲ್ಲದು, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದರು.

ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ಬಗ್ಗೆ ವಿದ್ಯಾರ್ಥಿನಿ ಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ನಕುಲ್ ದೇಶದಲ್ಲಿ ಇದೊಂದು ಸಾಂಕ್ರಾಮಿಕ ರೋಗದಂತೆ ಭಾಸವಾಗುತ್ತಿದೆ. ಭ್ರಷ್ಟಾಚಾರ ವಿರುದ್ಧ ಪ್ರತಿಯೊಬ್ಬರೂ ಒಂದಾಗಿ ಮುನ್ನಡೆದರೆ ಇದನ್ನು ತಡೆಗಟ್ಟಲು ಸಾಧ್ಯ ಎಂದರು.

ಹಲವು ಹಿನ್ನೆಲೆಗಳಿಂದ ಬಂದು ಉನ್ನತ ವ್ಯಾಸಂಗಕ್ಕೆ ಪದಾರ್ಪಣೆ ಮಾಡಿದ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿ ಉತ್ತಮ ವಿದ್ಯಾರ್ಜನೆ ಮಾಡಿಕೊಳ್ಳುವಂತೆ ನಕುಲ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ.ಸೀನಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಲಾಯಿತು.

ಈ ಸಂದರ್ಭ ರೋಟರಿ ಸಹಾಯಕ ರಾಜ್ಯಪಾಲ ಎಸ್.ಕೆ ಸತೀಶ್, ರೋಟರಿ ಕುಶಾಲನಗರ ಅಧ್ಯಕ್ಷರಾದ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಶಿಬು ಕುಮಾರ್, ಮಾಜಿ ಅಧ್ಯಕ್ಷ ನವೀನ್ ಕುಮಾರ್, ಮಹೇಶ್ ನಾಲ್ವಡೆ ಮತ್ತು ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಐಎಎಸ್ ಅಧಿಕಾರಿ ಎಸ್.ಎಸ್ ನಕುಲ್ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.