ಮಡಿಕೇರಿ, ಸೆ. ೨: ಕೋಮು ಪ್ರಚೋದನೆಯ ಮೂಲಕ ಸಮಾಜವನ್ನು ವಿಭಜಿಸಿ, ಕೇವಲ ಮತ ರಾಜಕಾರಣಕ್ಕೆ ಸೀಮಿತವಾಗಿ ರಾಜಕೀಯ ಪಕ್ಷಗಳು ಕಾರ್ಯಾಚರಿಸುತ್ತಿವೆ. ಇವುಗಳನ್ನು ಮೀರಿ ಜಾತಿ ಧರ್ಮಗಳ ಎಲ್ಲೆಯನ್ನು ದಾಟಿ ಕೊಡಗಿನಲ್ಲಿ ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವುದು ಅತ್ಯವಶ್ಯವೆಂದು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸಂಕೇತ್ ಪೂವಯ್ಯ, ಜಾತ್ಯತೀತ ಚಿಂತನೆಯ ಮಂದಿಯನ್ನು ಒಗ್ಗೂಡಿಸಿ ಕೋಮುವಾದದ ವಿರುದ್ಧ ಜಿಲ್ಲೆಯಲ್ಲಿ ಹೋರಾಟವನ್ನು ರೂಪಿಸಬೇಕು. ಆ ಮೂಲಕ ಸೌಹಾರ್ದಯುತ ಸಮಾಜವನ್ನು ಕಟ್ಟಬೇಕೆನ್ನುವ ಆಶಯಕ್ಕೆ ಪೂರಕವಾಗಿ ನಿರಂತರವಾಗಿ ವೇದಿಕೆ ಮೂಲಕ ಕಾರ್ಯ ನಿರ್ವಹಿಸುವುದಾಗಿ ಘೋಷಿಸಿದರು.

ಕೊಡಗು ಬಚಾವೋ ವೇದಿಕೆ ವತಿಯಿಂದ ಇದೇ ತಾ. ೧೩ರಂದು ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಸಮಾವೇಶವನ್ನು ಆಯೋಜಿಸ ಲಾಗಿದ್ದು, ಇದಕ್ಕೆ ಹಿರಿಯ ಚಿಂತಕರನ್ನು ಆಹ್ವಾನಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ವೇದಿಕೆಯ ಪ್ರಮುಖರಾದ ಪಾಣತ್ತಲೆ ವಿಶ್ವನಾಥ್ ಮಾತನಾಡಿ, ಅಶಾಂತಿಯ ವಾತಾವರಣದಿಂದ ಹೊರ ಬರಲು ಬಸವಣ್ಣನ ಸಮಾನತೆಯ ತತ್ವಾದರ್ಶಗಳು ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.

ವೇದಿಕೆಯ ಕಾರ್ಯದರ್ಶಿ ಮೋಹನ್ ಮೌರ್ಯ ಮಾತನಾಡಿ, ಕೋಮು ಭಾವನೆಗಳ ಮೂಲಕ ಕೊಡಗಿನಲ್ಲಿ ಅಶಾಂತಿಯನ್ನು ಬಿತ್ತುವ ಕಾರ್ಯವಾಗುತ್ತಿದೆ. ಇಂತಹದ್ದನ್ನು ಕಂಡೂ ಚಿಂತನಶೀಲರು ಮೌನವಾಗಿ ರುವುದೇ ಇದಕ್ಕೆ ಕಾರಣ ಎಂದು ದೂರಿದರು.

ಸುಂಟಿಕೊಪ್ಪದ ಎಂ.ಎA. ಶರೀಫ್ ಮಾತನಾಡಿ, ದಶಕಗಳ ಹಿಂದೆ ನಾವು ಕಂಡಿದ್ದ ಸುಂದರವಾದ, ಸ್ನೇಹಪೂರ್ಣವಾದ ಕೊಡಗನ್ನು ಮತ್ತೆ ಮರಳಿ ಪಡೆಯಬೇಕಾಗಿದೆ. ಆ ನಿಟ್ಟಿನ ಪ್ರಯತ್ನಗಳು ವೇದಿಕೆಯಿಂದ ನಡೆಯಲೆಂದು ಆಶಿಸಿದರು.

ನಿವೃತ್ತ ಪೌರಾಯುಕ್ತೆ ಹಾಗೂ ಜೆಡಿಎಸ್ ನಾಯಕಿ ಬಿ.ಬಿ. ಪುಷ್ಪಾವತಿ ಮಾತನಾಡಿ, ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಏಕೈಕ ಉದ್ದೇಶದಿಂದ ಸಮಾಜದ ಹಾದಿಯನ್ನು ತಪ್ಪಿಸುತ್ತಿವೆ. ಬಡಜನರ ಮೂಲಭೂತ ಸಮಸ್ಯೆಗಳು ರಾಜಕೀಯ ಪಕ್ಷಗಳಿಗೆ ಬೇಕಿಲ್ಲ. ಬದಲಾಗಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನಗಳಷ್ಟೆ ಅವರ ಮುಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುಲಾಬಿ ಜನಾದÀðನ್ ಮಾತನಾಡಿ, ಕೊಡಗಿನಲ್ಲಿ ವಿವಿಧ ಜಾತಿ, ಜನಾಂಗ ಬಾಂಧವರಿದ್ದು, ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸುವ ಕೆಲಸ ನಡೆಯಬೇಕೆಂದರು.

ಸಭೆೆಯಲ್ಲಿ ವೇದಿಕೆಯ ಪ್ರಮುಖರಾದ ಕೆ.ಎಂ. ಗಣೇಶ್, ವೇದಿಕೆ ಸಂಚಾಲಕ ಯೂಸುಫ್ ಕೊಂಡAಗೇರಿ, ಸುನಿಲ್, ಲೀಲಾ ಶೇಷಮ್ಮ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.