ಕುಶಾಲನಗರ,ಸೆ.೨ : ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ.೧.೧೦ ಕೋಟಿ ನಿವ್ವಳ ಲಾಭಗಳಿಸುವ ಮೂಲಕ ಕಳೆದ ೧೮ ವರ್ಷಗಳಿಂದ ಸತತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು.

ಬ್ಯಾಂಕಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ರೂ. ೨೪೩ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, ಅನುತ್ಪಾದಕ ಆಸ್ತಿಗಳಿಗೆ ರೂ ೪೬.೬೯ ಲಕ್ಷ, ಆದಾಯ ತೆರಿಗೆಗಳಿಗೆ ರೂ ೧೭.೯೩ ಲಕ್ಷ ಹಾಗೂ ಇತರೆ ಕಟ್ಟಡ ಮತ್ತು ಇತರ ಸವಕಳಿಗೆ ರೂ ೪೮.೧೬ ಲಕ್ಷಗಳನ್ನು ಕಾಯ್ದಿರಿಸಿದೆ. ಸಂಘವು ರೂ ೧.೧೦ ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿರುತ್ತದೆ ಎಂದರು. ಸಂಘವು ಕಳೆದ ೧೮ ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ಬಾರಿ ಪ್ರಪ್ರಥಮವಾಗಿ ತನ್ನ ಲಾಭವನ್ನು ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ ಎಂದರು.

ಸಂಘವು ಪ್ರಸಕ್ತ ೧೨೬೩ ಸದಸ್ಯರನ್ನು ಹೊಂದಿದ್ದು, ಅವರಿಂದ ಪಾಲುಬಂಡವಾಳ ರೂ.೩.೪೧ ಕೋಟಿಗಳನ್ನು ಸಂಗ್ರಹಿಸಿ ಕಳೆದ ಸಾಲಿಗಿಂತ ರೂ.೧೧ಲಕ್ಷಗಳಷ್ಟು ಹೆಚ್ಚಿಗೆ ಸಂಗ್ರಹಿಸಲಾಗಿದೆ. ಸಂಘವು ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು ೨೦೨೨ರ ಮಾರ್ಚ್ ತಿಂಗಳ ಅಂತ್ಯಕ್ಕೆ ಒಟ್ಟು ರೂ.೪೮.೩೮ ಕೋಟಿಗಳಷ್ಟು ಠೇವಣಿಯನ್ನು ಸ್ವೀಕರಿಸಲಾಗಿದೆ. ಇದು ಕಳೆದ ಸಾಲಿಗಿಂತ ರೂ.೫.೬೯ ಕೋಟಿಗಳಷ್ಟು ಹೆಚ್ಚಿಗೆ ಠೇವಣಿಯನ್ನು ಸಂಗ್ರಹಿಸಿ ಪ್ರಗತಿ ಸಾಧಿಸಿ ಸಂಘದ ದುಡಿಯುವ ಬಂಡವಾಳವು ರೂ. ಒಟ್ಟು ರೂ.೫೨.೭೩ ಕೋಟಿಗಳಿಂದ ರೂ.೬೦.೯೭ ಕೋಟಿಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ನಿರಖು ಠೇವಣಿಗಳಿಗೆ ಶೇ.೭.೫ ರಷ್ಟು ಅಧಿಕ ಬಡ್ಡಿಯನ್ನು ನೀಡುತ್ತಿದ್ದು, ಹಿರಿಯ ನಾಗರಿಕರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ, ಸಹಕಾರ ಸಂಘಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಶೇಕಡಾ ೦.೫೦ ಹೆಚ್ಚಿನ ಬಡ್ಡಿಯ ದರವನ್ನು ನೀಡುತ್ತಿದ್ದೇವೆ.

ಸಂಘದಲ್ಲಿ ಒಟ್ಟು ರೂ.೩.೨೧ಕೋಟಿಗಳಷ್ಟು ನಿಧಿಗಳಿದ್ದು ಇದರಲ್ಲಿ ಕ್ಷೇಮ ನಿಧಿ ರೂ.೧.೩೧ಕೋಟಿಗಳಷ್ಟು, ಕಟ್ಟಡ ನಿಧಿ ೧.೪೨ ಕೋಟಿಗಳಷ್ಟು, ಮರಣ ನಿಧಿ ರೂ.೨೧.೦೬ಲಕ್ಷಗಳಷ್ಟು, ಸಾಲಗಾರರ ಮರಣೋತ್ತರ ಪರಿಹಾರ ನಿಧಿ ರೂ.೩೦.೦೧ ಲಕ್ಷಗಳಷ್ಟು ಇರುತ್ತದೆ ಎಂದರು. ೨೦೨೨ ರ ಮಾರ್ಚ್ ಅಂತ್ಯಕ್ಕೆ ಸಂಘದಿAದ ೨೧೬ ಗುಂಪುಗಳ ೨೧೧೩ ರಷ್ಟು ಮಹಿಳೆಯರಿಗೆ ಸಾಲ ವಿತರಿಸಿ ಈ ವರದಿಯ ದಿನಾಂಕಕ್ಕೆ ಒಟ್ಟು ೮.೯೨ಕೋಟಿಗಳಷ್ಟು ಸಾಲ ವಿತರಿಸಲಾಗಿದೆ ಎಂದು ಮಾಹಿತಿ ಇತ್ತರು.

ಮಹಾಸಭೆ : ಸಂಘದ ೨೦೨೧-೨೨ ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. ೪ ರಂದು ಭಾನುವಾರ ಪೂರ್ವಾಹ್ನ ೧೧ ಗಂಟೆಗೆ ಗಾಯಿತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಶರವಣಕುಮಾರ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಎA.ಶಾಹೀರ್, ನಿರ್ದೇಶಕರಾದ ಎನ್.ಇ. ಶಿವಪ್ರಕಾಶ್ , ಜೋಸೇಫ್ ವಿಕ್ಟರ್ ಸೋನ್ಸ್, ಬಿ. ರಾಮಕೃಷ್ಣಯ್ಯ, ಕೆ.ಎಸ್. ಮಹೇಶ್, ನಾರಾಯಣ್ ಎಂ. ವಿ., ನಾಗೇಂದ್ರ ಬಾಬು, ಅಮೃತ್ ವಿ.ಸಿ., ಸುರೇಶ್ ಕುಮಾರ್, ಕೆ., ಕವಿತ ಮೋಹನ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಶ್ರೀಜೇಸ್ ಬಿ.ಡಿ, ಸಂಘದ ವ್ಯವಸ್ಥಾಪಕ ರಾಜು ಆರ್. ಇದ್ದರು.