ವೀರಾಜಪೇಟೆ, ಸೆ. ೨ : ಓಣಂ ಹಬ್ಬ ಆಚರಣೆಯನ್ನು ವಿಜೃಂಭಣೆಯಿAದ ಆಚರಿಸಲು ನಗರದ ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ತಿರ್ಮಾನಿಸಿದೆ.

ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ಮೀನುಪೇಟೆ ವತಿಯಿಂದ ೧೪ ನೇ ವರ್ಷದ ಓಣಂ ಆಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಕುರಿತಾಗಿ ಶ್ರೀ ಚೈತನ್ಯ ಮಠಪುರ ದೇವಾಲಯದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಸಿ.ಆರ್ ಬಾಬು ಸಮಿತಿಯು ತಾ. ೧೮ ರಂದು ಓಣಂ ಹಬ್ಬವನ್ನು ವಿವಿಧ ಸಂಸ್ಕೃತಿಕಾ ಕಾರ್ಯಕ್ರಮಗಳೊಂದಿಗೆ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಮುತ್ತಪ್ಪ ಕಲಾ ಮಂಟಪದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮ ದಿನದಂದು ಬೆಳಿಗ್ಗೆ ಮಹಾಬಲಿಯನ್ನು ಬರಮಾಡಿಕೊಳ್ಳುವುದು, ಪೂಕಳಂ (ಹೂವಿನ ರಂಗೋಲಿ) ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ನಗರದ ಪ್ರಮುಖ ರಸ್ತೆಗಳಲ್ಲಿ ಮಲೆಯಾಳಂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಾದ್ಯಗೋಷ್ಠಿಯೊಂದಿಗೆ ಮಾವೇಲಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ವಿಶೇಷ ಓಣಂ ಸದ್ಯ ನಡೆಯಲಿದೆ ಎಂದು ಹೇಳಿದರು.

ಓಣಂ ಆಚರಣಾ ಸಮಿತಿಯ ಅಧ್ಯಕ್ಷ ಟಿ.ಕೆ. ಪದ್ಮನಾಭ ಮಾತನಾಡಿ, ಹಬ್ಬದ ಪ್ರಯುಕ್ತ ಅಪರಾಹ್ನ ಕಾರ್ಯಕ್ರಮದ ವೇದಿಕೆ ಉದ್ಘಾಟನೆ ಸಂಸ್ಕೃತಿಯ ಅನಾವರಣಗೊಳಿಸುವ ತಿರುವಾದಿರ ನೃತ್ಯ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಸಂಜೆ ಸಮಾರೋಪ ಸಮಾರಂಭ ಬಹುಮಾನ ವಿತರಣೆ ಮತ್ತು ಓಣಂ ಸಹಾಯಾರ್ಥ ಕೂಪನ್ ಡ್ರಾ ಫಲಿತಾಂಶ ನಡೆಯಲಿದೆ. ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಅಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸಮಿತಿಯ ಕೋಶಾಧಿಕಾರಿಗಳಾದ ಸಿ.ಆರ್. ಸಜೀವನ್ ಮಾತನಾಡಿ, ಗಣ್ಯರು ಹೂವಿನ ರಂಗೋಲಿ (ಪೂಕಳಂ) ಸ್ಫರ್ಧೆಯಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸ್ಫರ್ಧಿಗಳು ತಾ. ೫ ರ ಒಳಗಾಗಿ ತಂಡದ ಹೆಸರನ್ನು ನೋಂದಾಯಿಸತಕ್ಕದ್ದು. ನಂತರ ಬರುವ ತಂಡಗಳಿಗೆ ಅವಕಾಶವಿರುವುದಿಲ್ಲ. ವೀರಾಜಪೇಟೆ ನಗರ ಮತ್ತು ಗ್ರಾಮಾಂತರ ಹಿಂದೂ ಮಲಯಾಳಿಗಳಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪದ್ಮನಾಭ ೯೪೮೦೨೫೭೭೮೬, ಸಿ.ಆರ್ ಬಾಬು ೯೭೩೧೨೫೮೧೯೭, ಮತ್ತು ಸಿ.ಆರ್. ಸಜೀವನ್ ೯೪೪೮೭೨೧೧೧೮ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ಎಂ.ಎಸ್. ಸತೀಶ್, ಸಮಿತಿಯ ಸದಸ್ಯರುಗಳಾದ ಕೆ.ಎನ್. ಉಪೇಂದ್ರ, ಅನಿಲ್ ಕೆ,ಕೆ, ಮತ್ತು ಚಂದ್ರನ್ ಉಪಸ್ಥಿತರಿದ್ದರು.