ಮಡಿಕೇರಿ, ಆ. ೨೯: ಭಾಷೆಯನ್ನು ಉಪಯೋಗಿಸಿದರೆ ಮಾತ್ರ ಬೆಳೆಯುತ್ತದೆ, ಸ್ಥಳೀಯ ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯವೆಂದು ಶಾಸಕ ಕೊಂಬಾರನ ಜಿ. ಬೋಪಯ್ಯ ಹೇಳಿದರು.

ಇಲ್ಲಿನ ಕೊಡಗು ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಹಾಗೂ ದಶವರ್ಷ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಭಾರತ ದೇಶದಲ್ಲಿ ಹಿಂದೂ ಸಂಸ್ಕೃತಿಯೊAದಿಗೆ ಅನೇಕತೆಯಲ್ಲಿ ಏಕತೆಯಿದೆ, ಊರಿಂದ ಮತ್ತೊಂದು ಊರಿಗೆ ಆಚಾರ-ವಿಚಾರ, ಸಂಸ್ಕೃತಿಯಲ್ಲಿ ವ್ಯತ್ಯಾಸಗಳಿವೆ. ಸಾವಿರಕ್ಕೂ ಅಧಿಕ ಭಾಷೆಗಳಿದ್ದು, ಕೆಲವು ನಾಶವಾಗುತ್ತಿವೆ. ಈ ಬಗ್ಗೆ ಚಿಂತನೆ ನಡೆಸಿದ ಸರಕಾರ ಭಾಷೆಗಳು ನಶಿಸಿ ಹೋಗಬಾರದೆಂದು ಅವುಗಳ ಉಳಿವಿಗಾಗಿ ವಿವಿಧ ಭಾಷಾ ಅಕಾಡೆಮಿಗಳನ್ನು ರಚನೆ ಮಾಡಿದೆ. ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ಅಕಾಡೆಮಿಗಳು ಕಾರ್ಯೋನ್ಮುಖವಾಗಿದ್ದು, ಎಲ್ಲರೂ ಕೂಡ ಕೈಜೋಡಿಸಬೇಕಿದೆ ಎಂದು ಹೇಳಿದರು.

ದುರಾಭಿಮಾನ ಬೇಡ

ನಮ್ಮ ಭಾಷೆಯೊಂದಿಗೆ ಬೇರೆ ಭಾಷೆಯ ಬಗ್ಗೆಯೂ ಗೌರವ, ಅಭಿಮಾನ

(ಮೊದಲ ಪುಟದಿಂದ) ಇರಬೇಕು, ದುರಾಭಿಮಾನ ಬೇಡ, ಅದು ಸಮಾಜಕ್ಕೆ ಕಂಟಕವಾಗಲಿದೆ. ಪ್ರಸ್ತುತ ಇಂಗ್ಲಿಷ್ ಮೇಲೆ ವ್ಯಾಮೋಹ ಹೆಚ್ಚಾಗಿದೆ, ಇಂಗ್ಲಿಷ್ ಅನಿವಾರ್ಯವಾದರೂ ನಮ್ಮ ಭಾಷೆಯನ್ನು ನಾವು ಉಪಯೋಗಿಸಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಮುಜುಗರ ಬೇಡ

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ನಮ್ಮ ಭಾಷೆ ಮಾತನಾಡಲು ಮುಜುಗರ ಬೇಡ, ಇಂಗ್ಲಿಷ್, ಕನ್ನಡ ಮಾತನಾಡುತ್ತಾ ನಮ್ಮ ಭಾಷೆಯನ್ನು ಮರೆಯುತ್ತಿದ್ದಾರೆ. ಭಾಷೆಯೊಂದಿಗೆ ಸಾಹಿತ್ಯ, ಸಂಸ್ಕೃತಿಯನ್ನು ಗುರುತಿಸಿ ಪ್ರೋತ್ಸಾಹಿಸಿಕೊಂಡು ಹೋಗಬೇಕು. ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ಸಮಾಜದಲ್ಲಿನ ಕಟ್ಟಕಡೆಯ ಬಡವರನ್ನು ಗುರುತಿಸಿ ಮೇಲೆತ್ತುವ ಕೆಲಸ ಮಾಡಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಿಸಿದರು.

ಸಾಮರಸ್ಯ ಕಾಪಾಡಿಕೊಳ್ಳಬೇಕು

ಭಾರತ ವಿವಿಧ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದ್ದು, ಆಧುನಿಕತೆಯಿಂದಾಗಿ ನಮ್ಮ ಸಂಸ್ಕೃತಿಯನ್ನು ಮರೆಯುವ ಪರಿಸ್ಥಿತಿ ಎದುರಾಗಿದೆ. ಅಕಾಡೆಮಿಗಳ ಸ್ಥಾಪನೆಗೆ ಮೊದಲು ಲಿಪಿಯೇ ಇಲ್ಲದ ಅರೆಭಾಷೆ, ಕೊಡವ ಭಾಷೆ, ಸಂಸ್ಕೃತಿಯನ್ನು ಹಿರಿಯರು ಉಳಿಸಿಕೊಂಡು ಬಂದಿದ್ದಾರೆ, ಹಾಗಾಗಿ ಸಂಸ್ಕೃತಿ ಇನ್ನೂ ಕೂಡ ಉಳಿದುಕೊಂಡಿದೆ. ಅಂತಹ ಹಿರಿಯರನ್ನು ಗುರುತಿಸಿ ಗೌರವಿಸಿ, ನೆನಪಿಸಿಕೊಳ್ಳಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು. ಇಂಗ್ಲಿಷ್, ಕನ್ನಡ, ಇತರ ಭಾಷೆಗಳನ್ನು ಶಾಲೆಯಲ್ಲಿ ಕಲಿಸುತ್ತಾರೆ. ನಮ್ಮ ಭಾಷೆಯನ್ನು ಮನೆಯಿಂದಲೇ ಕಲಿಯಬೇಕು. ಸಂಸ್ಕೃತಿಯ ಭಾಗವಾದ ಹಾಡು, ಹಬ್ಬ ಹರಿದಿನ, ಸಂಪ್ರದಾಯಗಳನ್ನು ಕಲಿಯಬೇಕು. ಯಾವದೇ ಭಾಷೆ, ಸಂಸ್ಕೃತಿಯ ನಡುವೆ ಪೈಪೋಟಿ ಇರಬಾರದು. ಸಾಮರಸ್ಯ ಕಾಪಾಡಿಕೊಂಡು ಹೋಗಬೇಕು, ಆಗ ಸಮಾಜ ಚೆನ್ನಾಗಿರುತ್ತದೆ ಎಂದು ಹೇಳಿದರು.

ಸಹಕಾರದಿಂದಾಗಿ ಕೆಲಸ

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಮಾತನಾಡಿ, ಎಲ್ಲರ ಸಹಕಾರದಿಂದಾಗಿ ಮೂರು ವರ್ಷದ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ಮುಂದಿನ ತಿಂಗಳಲ್ಲಿ ವಿಶ್ವಕೋಶ ಬಿಡುಗಡೆ ಮಾಡಲಾಗುವದೆಂದು ಹೇಳಿದರು. ಮಂಗಳೂರು ವಿವಿ ಅಧೀನದಲ್ಲಿ ಅರೆಭಾಷೆ ಅಧ್ಯಯನ ಕೇಂದ್ರ ಸ್ಥಾಪನೆಗೊಳ್ಳಲಿದ್ದು, ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅಧ್ಯಯನ, ಸಂಶೋಧನೆ ಮಾಡಲು ಅನುಕೂಲವಾಗಲಿದೆ. ಆಸಕ್ತರು ಸದುಪಯೊಗಪಡಿಸಿಕೊಳ್ಳುವಂತೆ ಕೋರಿದರು. ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಹಾಗೆಯೇ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಲೇಖನಗಳ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಿರುವದಾಗಿ ಹೇಳಿದರು. ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಕೊಲ್ಯದ ಗಿರೀಶ್, ಪಿ.ಸಿ.ಜಯರಾಂ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಗೌರವ ಪ್ರಶಸ್ತಿ ಪ್ರದಾನ

ಇದೇ ಸಂದರ್ಭದಲ್ಲಿ ೨೦೨೧-೨೨ರ ಸಾಲಿನ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾದ ಸಾಹಿತ್ಯ ಕ್ಷೇತ್ರದಿಂದ ಪಿ.ಜಿ. ಅಂಬೆಕಲ್, ರಂಗಭೂಮಿಯಿAದ ತುಕಾರಾಮ್ ಏನೆಕಲ್, ಹಾಗೂ ಸಂಸ್ಕೃತಿ ಕ್ಷೇತ್ರದಿಂದ ಚಂಡಿರ ಕೆ. ಬಸಪ್ಪ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸೋಬಾನೆ ಸಂಗ್ರಹ ಮಾಡಲು ಸಹಕರಿಸಿದ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಹಾಗೂ ಅಂಚೆ ಲಕೋಟೆ ವಿನ್ಯಾಸಗೊಳಿಸಿದ ಕಲಾವಿದ ಬಿ.ಆರ್. ಸತೀಶ್ ಅವರುಗಳನ್ನು ಅಭಿನಂದಿಸಲಾಯಿತು. ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ಲೇಖನಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪುತ್ತೂರಿನ ಕಲಾವಿದ ಲಿಂಗಪ್ಪ ಗೌಡ ಅವರಿಂದ ಕೊಳಲುವಾದನ ಕಾರ್ಯಕ್ರಮ ಮೂಡಿಬಂದಿತು.

ವೇದಿಕೆಯಲ್ಲಿ ಅಕಾಡೆಮಿ ಸದಸ್ಯರುಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಡಾ. ಕೂಡಕಂಡಿ ದಯಾನಂದ, ಡಾ. ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಡಾ. ಪುರುಷೋತ್ತಮ ಕರಂಗಲ್ಲು, ರಿಜಿಸ್ಟಾçರ್ ಚಿನ್ನಸ್ವಾಮಿ ಇದ್ದರು. ಬಿಂದು ಹುಲಿಮನೆ ಆಶಯ ಗೀತೆ ಹಾಡಿದರೆ, ಅಕಾಡೆಮಿ ಸದಸ್ಯೆ ಸ್ಮಿತಾ ಅಮೃತರಾಜ್ ಸ್ವಾಗತಿಸಿದರು. ಸೀತಾರಾಮ ಕೇವಳ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾತನಾಡಿದರೆ, ಅಕಾಡೆಮಿ ಸದಸ್ಯರುಗಳಾದ ಕಿರಣ್ ಕುಂಬಳಚೇರಿ, ಪುರುಷೋತ್ತಮ ಕಿರ್ಲಾಯ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಸದಸ್ಯರಾದ ಧನಂಜಯ ಅಗೋಳಿಕಜೆ ನಿರೂಪಿಸಿದರೆ, ಕುಸುಮಾಧರ ಎ.ಟಿ. ವಂದಿಸಿದರು.