ಮಡಿಕೇರಿ, ಆ. ೨೯: ಕೊಡಗಿನಲ್ಲಿ ಆಗಸ್ಟ್ನ ಆತಂಕದ ಮಳೆ ಇನ್ನೂ ನಿಂತಿಲ್ಲ. ಗಡಿಪ್ರದೇಶವಾದ ಕೊಯನಾಡು, ಚೆಂಬು, ದಬ್ಬಡ್ಕ, ಊರುಬೈಲು, ಮುಂಡಡ್ಕ ಮೊದಲಾದೆಡೆ ಪ್ರವಾಹ, ಭೂಕುಸಿತಗಳ ಆತಂಕ ಹಾನಿ ಹೆಚ್ಚಾಗುತ್ತಿದೆ. ಈ ವಿಭಾಗದ ಜನಜೀವನ ಅಸ್ತವ್ಯಸ್ತಗೊಂಡು ಮುಂದಿನ ದಾರಿ ಕಾಣದಂತಹ ದುಸ್ಥಿತಿ ಎದುರಾಗುತ್ತಿದೆ. ಇತ್ತೀಚಿಗಷ್ಟೇ ಕೊಯನಾಡಿನ ಪಯಸ್ವಿನಿಯ ಅಡ್ಡಲಾಗಿರುವ ಕಿಂಡಿ ಅಣೆಕಟ್ಟೆಯಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಬಂದು ನೀರಿನ ಸುಗಮ ಸಂಚಾರಕ್ಕೆ ತಡೆಯಾಗಿ ನಿಂತಿದ್ದ ಮರಗಳ ದಿಮ್ಮಿಗಳಿಂದಾಗಿ ಆ ಪ್ರದೇಶದಲ್ಲಿ ಜಲಸ್ಫೋಟದಂತಹ ದಿಢೀರ್ ಪ್ರವಾಹ ಎದುರಾಗಿ ನಿವಾಸಿಗಳಿಗೆ ಪ್ರಾಣಪಾಯ ಎದುರಾಗಿತ್ತು.
ಇಂದು ಬೆಳಗ್ಗಿನ ಜಾವ ಮತ್ತೆ ಅದೇ ಸ್ಥಿತಿ ಉಂಟಾಗಿದೆ. ಈ ಹಿಂದೆ ಜಿಲ್ಲಾಡಳಿತ ಅರಣ್ಯ ಇಲಾಖೆಯ ಮೂಲಕ ಮರದ ದಿಮ್ಮಿಗಳನೆಲ್ಲ ತೆಗೆದು ನೀರು ಸುಗಮವಾಗಿ ಸಾಗಲು ಅವಕಾಶ ಮಾಡಿದ್ದರೂ, ನಿನ್ನೆ ರಾತ್ರಿ ಸುರಿದ ಮಳೆ ಸಂದರ್ಭ ಮತ್ತೆ ಭಾರೀ ಪ್ರಮಾಣದ ಮರದ ದಿಮ್ಮಿಗಳು ನೀರಿನಲ್ಲಿ ಹರಿದು ಬಂದು ಸೇತುವೆಯ ಮಾರ್ಗವನ್ನು ಆಕ್ರಮಿಸಿದವು. ಇದರಿಂದಾಗಿ ಬೆಳಿಗ್ಗೆ ಸುಮಾರು ೪.೩೦ರ ವೇಳೆ ಸನಿಹದ ೫ ಮನೆಗಳ ನಿವಾಸಿಗಳು ಗಾಢ ನಿದ್ರೆಯಿಂದ ಎಚ್ಚೆತ್ತು ಪಯಸ್ವಿನಿ ನದಿಯ ನೀರಿನ ಆರ್ಭಟದ ಶಬ್ದದಿಂದ ಬೆಚ್ಚಿ ಬಿದ್ದಿದ್ದಾರೆ. ಇನ್ನೇನು ಮನೆಯೊಳಗೆ ನೀರು ತೀರಾ ರಭಸದಲ್ಲಿ ಪ್ರವೇಶಿಸುವ ದೃಶ್ಯ ಕಂಡು; ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಅಲ್ಲಲ್ಲಿ ಬಿಟ್ಟು ‘ಬದುಕಿದೆಯ ಬಡ ಜೀವ’ ಎನ್ನುವಂತೆ ಸಿಕ್ಕಿದ ಮಾರ್ಗದಲ್ಲಿ ಓಡಿಹೋಗಿ ನೀರಿನ ರಭಸದಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾದರು.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಸತೀಶ ಬಿ.ಸಿ. ಅವರು, ಅರಣ್ಯ ಇಲಾಖಾ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ತೆರಳಿ ಕ್ರೇನ್ಗಳ ಮೂಲಕ
(ಮೊದಲ ಪುಟದಿಂದ) ಮರದ ದಿಮ್ಮಿಗಳನ್ನು ತೆಗೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆದರೂ ಈ ವಿಭಾಗದ ಮಂದಿ ಮತ್ತೆ ಇದೇ ಸ್ಥಿತಿ ಬರಬಹುದು ಎನ್ನುವ ಆತಂಕ ಛಾಯೆಯಲ್ಲಿ ಇದ್ದಾರೆ. ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ಗ್ರಾಮಸ್ಥರ ನೆರವಿನಿಂದ ಮಡಿಕೇರಿ ತಹಶೀಲ್ದಾರ್ ಮಹೇಶ್ ಅವರ ನೇತೃತ್ವದಲ್ಲಿ ಸ್ಥಳಾಂತರಿಸಲಾಗಿದೆ.
ಈ ನಡುವೆ ಮುಂಡಡ್ಕ ಎಂಬಲ್ಲಿ ಕಾಲು ಸೇತುವೆ ಕುಸಿದು ಜನ ಸಂಚಾರಕ್ಕೆ ಧಕ್ಕೆಯುಂಟುಮಾಡಿದೆ. ಚೆಂಬು ಮತ್ತು ಊರುಬೈಲು ನಡುವೆ ಇದ್ದ ಕಾಲು ಸೇತುವೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಚೆಡಾವು ಮತ್ತು ಕೊಯನಾಡು ಎಸ್ಟೇಟ್ ನಡುವಿನ ಕಾಲು ಸೇತುವೆಯೂ ಕೊಚ್ಚಿ ಹೋಗಿದ್ದು, ಕಾರ್ಮಿಕರು ಅತೀ ದೂರದ ದಾರಿಯಲ್ಲಿ ನಡೆದು ತಮ್ಮ ನಿತ್ಯ ಕರ್ತವ್ಯವನ್ನು ನೆರವೇರಿಸುವಂತಹ ದುಸ್ಥಿತಿ ಎದುರಾಗಿದೆ. ಚೆಂಬು ಗ್ರಾಮದ ಆನೆಹಳ್ಳ ಎಂಬಲ್ಲಿ ಕಾಲು ಸೇತುವೆಯೊಂದು ಹಾನಿಗೊಳಗಾಗಿದೆ. ದಬ್ಬಡ್ಕದಲ್ಲಿಯೂ ಗುಡ್ಡವೊಂದು ಕುಸಿದಿದ್ದು, ಸಮೀಪದ ರವಿ ಎಂಬವರ ಮನೆಗೆ ಹಾನಿ ಸಂಭವಿಸಿದೆ.
ಇತ್ತೀಚೆಗಷ್ಟೇ ಮಳೆ ಹಾಗೂ ಪ್ರವಾಹದಿಂದ ಹಾನಿಗೀಡಾಗಿದ್ದ ಮಾರ್ಪಡ್ಕ - ಊರುಬೈಲು ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದ್ದು, ಇದೀಗ ಆ ಸೇತುವೆಯ ಎರಡು ಬದಿಗಳು ಪ್ರವಾಹ ರಭಸದಿಂದ ಸಂಪೂರ್ಣ ಕೊಚ್ಚಿಕೊಂಡು ಹೋಗಿವೆ. ಈ ವಿಭಾಗದಲ್ಲಿ ಅನೇಕ ಬೆಳೆಗಾರರ ಅಡಿಕೆ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ. ಮಳೆಯಿಂದಾಗಿ ನಾಕಲ್ಮೊಟ್ಟೆಯಲ್ಲಿಯೂ ಗುಡ್ಡವೊಂದು ಕುಸಿದಿದೆ.
ಪಯಸ್ವಿನ ನದಿ ಪಾತ್ರದ ಗೂನಡ್ಕ - ಪೇರಡ್ಕ ಮಾರ್ಗಗಳಲ್ಲಿಯೂ ಪ್ರವಾಹದಿಂದ ಹಾನಿ ಸಂಭವಿಸಿವೆ. ಈಗಿನ ಪ್ರವಾಹದಲ್ಲಿ ಗಡಿಪ್ರದೇಶದ ೩೦ ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ ಎಂದು ಹೇಳಲಾಗಿದೆ. ಬಹುಸಂಖ್ಯೆಯಲ್ಲಿ ಸಾಕು ಪ್ರಾಣಿಗಳು ಪ್ರವಾಹದ ಪಾಲಾಗಿವೆ.
ಕಡಮಕಲ್ಲು ಎಸ್ಟೇಟ್ನಲ್ಲಿಯೂ ನಿನ್ನೆ ರಾತ್ರಿ ಭಾರೀ ಪ್ರಮಾಣದ ಭೂಕುಸಿತವುಂಟಾಗಿದ್ದು, ಜಲಾವೃತವಾಗಿತ್ತು. ಕಲ್ಮಕಾರಿನ ಬೈಲು ಎಂಬಲ್ಲಿಯೂ ಪಯಸ್ವಿನಿ ನದಿಯಲ್ಲಿ ಮರಗಳು ತೇಲಿ ಬಂದಿದೆ. ಉಪ್ಪುಕಳ ವಿಭಾಗದಲ್ಲಿಯೂ ಮಳೆಯಾಗಿದ್ದು, ಅಲ್ಲಿನ ಕಾಲು ಸೇತುವೆ ಇದೀಗ ಮೂರನೇ ಬಾರಿ ಕೊಚ್ಚಿ ಹೋಗಿದೆ.
ಸ್ಥಳಾಂತರ : ಪಯಸ್ವಿನಿ ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ಅಪಾಯದಲ್ಲಿದ್ದ ೪ ಕುಟುಂಬದ ೧೫ ಮಂದಿಯನ್ನು ಕೊಯನಾಡು ಸರಕಾರಿ ಶಾಲಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
(ವರದಿ : ಗಿರೀಶ್ ಪೆರಾಜೆ, ಶಬರೀಶ್, ಮಹಮ್ಮದ್ ಕುಞೆ, ಇಬ್ರಾಹಿಂ ಜಿ.ಎ.)