ಸೋಮವಾರಪೇಟೆ, ಆ. ೨೮: ಕರ್ನಾಟಕ ಸರ್ಕಾರ ಕಳೆದ ಜು. ೨೭ ರಂದು ಪ್ರಕಟಿಸಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಸದಸ್ಯರನ್ನು ತೆಗೆದು ಹಾಕುವ ಪ್ರಕ್ರಿಯೆ) ನಿಯಮಗಳ ಕರಡನ್ನು ಸೋಮವಾರಪೇಟೆ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ತೀವ್ರವಾಗಿ ವಿರೋಧಿಸುತ್ತದೆ ಎಂದು ಅಧ್ಯಕ್ಷ ಎ.ಎಸ್. ನವೀನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಡಿಒ ಹೊರತುಪಡಿಸಿ ಮೇಲಿನ ಎಲ್ಲಾ ಹಂತದ ಅಧಿಕಾರಿಗಳಿಗೆ ಪಂಚಾಯಿತಿ ಸದಸ್ಯರ ಮೇಲೆ ದೂರು ಸ್ವೀಕರಿಸುವ, ತನಿಖೆ ಮಾಡುವ ಅಧಿಕಾರವನ್ನು ಈ ನಿಯಮದ ಪ್ರಕಾರ ನೀಡಲಾಗಿದೆ. ಸಂವಿಧಾನ ಬದ್ಧ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗಳಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸದಸ್ಯರನ್ನು ಸರ್ಕಾರಿ ನೌಕರರೆಂಬAತೆ ಪರಿಗಣಿಸಿ ಅಧಿಕಾರಿಶಾಹಿ ವ್ಯವಸ್ಥೆ ಮೂಲಕ ಕಟ್ಟಿಹಾಕಲು ಮುಂದಾಗಿರುವುದು ಖಂಡನೀಯ. ವಿಕೇಂದ್ರಿಕರಣದ ವಿರುದ್ಧ ಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ಪ್ರತಿಷ್ಠಾಪಿಸಲು ಸರ್ಕಾರ ಹೊರಟಿದೆ. ಸ್ಥಳೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶಮಾಡಲು ಹೊರಟಿದೆ. ಪ್ರಕರಣ ೪೩(ಎ) ಮತ್ತು ೪೮(೪)(೫)ರ ಅಡಿಯಲ್ಲಿ ದೂರು ಸ್ವೀಕರಿಸುವ ಅಧಿಕಾರ ಕಾಯ್ದೆಯಲ್ಲಿರುವಂತೆ ರಾಜ್ಯ ಸರ್ಕಾರಕ್ಕೆ ಮಾತ್ರ ಇರಬೇಕು. ಹಾಗು ದೂರಿನ ಮೇಲೆ ರಾಜ್ಯ ಸರ್ಕಾರವೇ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.