ಸೋಮವಾರಪೇಟೆ, ಆ. ೨೮: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪರಿಷತ್ ಭವನದಲ್ಲಿ ನಡೆದ ಸದಸ್ಯತ್ವ ಆಂದೋಲನಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಚಾಲನೆ ನೀಡಿದರು.

ಕನ್ನಡ ಭಾಷಾ ಬೆಳವಣಿಗೆಗೆ ನಾವೆಲ್ಲರು ಶ್ರಮಪಡಬೇಕಿದೆ. ನಾಡು, ನುಡಿಗೆ ಅನ್ಯಾಯವಾದರೆ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ ಬಲಿಷ್ಠವಾಗ ಬೇಕಾದರೆ, ಕನ್ನಡ ಪ್ರೇಮಿಗಳು ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರಿದ್ದಾರೆ. ಪ್ರತಿ ಸದಸ್ಯರು ತಲಾ ೧೦ ಮಂದಿ ಸದಸ್ಯತ್ವ ನೋಂದಾಣಿ ಮಾಡಬೇಕು. ಮೊಬೈಲ್ ಪ್ಲೇಸ್ಟೋರ್‌ನಲ್ಲಿ ಕ.ಸಾ.ಪ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸದಸ್ಯತ್ವ ಪಡೆದುಕೊಳ್ಳಬಹುದು ಎಂದರು. ಹೆಚ್ಚಿನ ಮಾಹಿತಿಗಾಗಿ ೯೮೪೫೦೦೫೪೫೩ ಸಂಪರ್ಕಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಕ.ಸಾ.ಪ ಮಾಜಿ ಅಧ್ಯಕ್ಷರುಗಳಾದ ಎಚ್.ಜೆ. ಜವರಪ್ಪ, ಜೆ.ಸಿ. ಶೇಖರ್, ತಾಲೂಕು ಕಾರ್ಯದರ್ಶಿಗಳಾದ ಎ.ಪಿ. ವೀರರಾಜು, ಜ್ಯೋತಿ ಶನಿವಾರಸಂತೆ ಹೋಬಳಿ ಅಧ್ಯಕ್ಷ ಬಿ.ಬಿ. ನಾಗರಾಜು, ಕಾರ್ಯದರ್ಶಿ ಶಿವಲಿಂಗಯ್ಯ ಇದ್ದರು.