ಪೊನ್ನಂಪೇಟೆ, ಆ. ೨೭: ಮುತ್ಸದ್ದಿ ರಾಜಕಾರಣಿ ದಿ. ಎ.ಕೆ. ಸುಬ್ಬಯ್ಯ ಅವರ ಹೋರಾಟದ ಫಲವನ್ನು ಇಂದಿಗೂ ಅನುಭವಿಸಲಾಗುತ್ತಿದೆ. ಅದರಲ್ಲೂ ಕೊಡಗಿನ ಬಹುತೇಕ ಹಿಡುವಳಿದಾರರು ಸುಬ್ಬಯ್ಯನವರ ಹೋರಾಟದ ಫಲಾನುಭವಿಗಳು ಎಂದು ಜಿಲ್ಲೆಯ ಹಿರಿಯ ಮುಖಂಡ ಚಕ್ಕೆರ ಕೆ. ಸೋಮಯ್ಯ ಹೇಳಿದರು.
ಎ.ಕೆ. ಸುಬ್ಬಯ್ಯ ಅವರ ೩ನೇ ಪುಣ್ಯಸ್ಮರಣೆ ಅಂಗವಾಗಿ ಎ.ಕೆ. ಸುಬ್ಬಯ್ಯ-ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ಹಾಗೂ ‘eviಜhಥಿಚಿ.ಛಿom’ ವತಿಯಿಂದ ಶಕ್ತಿ ಪತ್ರಿಕೆಯ ಸಹಯೋಗದಲ್ಲಿ ಹುದಿಕೇರಿಯ ಕೊಡವ ಸಮಾಜದ ಸಭಾಂಗಣದಲ್ಲಿ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾಗಿದ್ದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಅನ್ಯಾಯದ ವಿರುದ್ಧ ಪ್ರಖರವಾಗಿ ಧ್ವನಿ ಎತ್ತಿ ಹೋರಾಡಿದ್ದ ಎ.ಕೆ. ಸುಬ್ಬಯ್ಯ ಅವರ ಹೆಸರು ರಾಜ್ಯ ರಾಜಕಾರಣದಲ್ಲಿ ಶಾಶ್ವತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ, ತಮ್ಮ ಪೋಷಕರಿಗೆ ವಿದ್ಯಾರ್ಥಿಗಳ ಬಗ್ಗೆ ವಿಶೇಷವಾದ ಮಮತೆಯಿತ್ತು. ಅವರಿಗೆ ಹೆಣ್ಣು ಮಕ್ಕಳಿಲ್ಲದ ಕಾರಣ ವಿದ್ಯಾರ್ಥಿನಿಯರ ಬಗ್ಗೆ ಹೆಚ್ಚು ಪ್ರೀತಿ ಇತ್ತು. ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ಬರಬೇಕೆಂಬುದು ತಮ್ಮ ಪೋಷಕರ ದೂರದೃಷ್ಟಿತ್ವವಾಗಿತ್ತು. ಇದು ಅವರ ಹೆಸರಿನಲ್ಲಿ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ಸ್ಥಾಪನೆಗೆ ಪ್ರೇರಣೆಯಾಯಿತು ಎಂದು ವಿವರಿಸಿದರಲ್ಲದೆ, ಮನುಷ್ಯನ ಭವಿಷ್ಯವನ್ನು ಬೇರೆಯವರಿಂದ ರೂಪಿಸಲು ಸಾಧ್ಯವಿಲ್ಲ. ಆದ್ದರಿಂದ ಬದುಕಿನಲ್ಲಿ ಪರಿಪೂರ್ಣತೆ ಹೊಂದಲು ಅವರ ಭವಿಷ್ಯವನ್ನು ಅವರೇ ರೂಪಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ ವೃದ್ಧಿಸಿದರೆ ಮಾತ್ರ ಬದುಕಿನಲ್ಲಿ ಮುಂದೆ ಬರಲು ಸಾಧ್ಯ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಇನ್ನೊಬ್ಬರಿಂದ ನಿರ್ಧರಿತವಾಗಿ ಹೇರಿಸಿಕೊಳ್ಳಬಾರದು. ಸಾಮಾಜಿಕ ಬದುಕಿನಲ್ಲಿ ಅಡ್ಡ ಬರುವ ರೂಪಿತ ವ್ಯವಸ್ಥೆಗಳನ್ನು ಅಚಲತೆಯೊಂದಿಗೆ ಮೆಟ್ಟಿ ನಿಂತು ಮುನ್ನಡೆದರೆ ಮಾತ್ರ ಯಶಸ್ವಿ ಸಾಧ್ಯ. ಅದಕ್ಕಾಗಿ ಆದರ್ಶ ವ್ಯಕ್ತಿತ್ವವುಳ್ಳ ಮಹಾತ್ಮರ ಜೀವನ ಚರಿತ್ರೆ ಓದುವಂತಾಗಬೇಕು ಎಂದು ಪೊನ್ನಣ್ಣ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಶೈಕ್ಷಣಿಕ ಉನ್ನತಿ ಬಗ್ಗೆ ದೂರದೃಷ್ಟಿ ಹೊಂದಿದ್ದ ಎ.ಕೆ. ಸುಬ್ಬಯ್ಯ ಅವರು ಮರೆಯಲಾಗದ ವ್ಯಕ್ತಿತ್ವದವರಾಗಿದ್ದಾರೆ. ಕೊಡಗಿನ ರಾಜಕಾರಣದ ಇತಿಹಾಸಕ್ಕೆ ವಿಶೇಷ ಛಾಪು ಮೂಡಿಸಿದ್ದ ಸುಬ್ಬಯ್ಯ ಅವರು ಪೊನ್ನಂಪೇಟೆ ನ್ಯಾಯಾಲಯ ಸ್ಥಾಪನೆಗೆ ಅಂದಿನ ಮುಖ್ಯ ನ್ಯಾಯಮೂರ್ತಿಗಳಿಂದ ಅನುಮತಿ ಕೊಡಿಸುವಲ್ಲಿ ನಿರ್ವಹಿಸಿದ ಪಾತ್ರ ಸ್ಮರಣೀಯವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ‘ಶಕ್ತಿ’ ದಿನ ಪತ್ರಿಕೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಜಿ.ಆರ್. ಪ್ರಜ್ವಲ್ ಮಾತನಾಡಿ, ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮತ್ತು ಸೇವೆ ಮಾಡುವ ಮನೋಭಾವ ಕುಂಠಿತವಾಗುತ್ತಿರುವ ಈ ಕಾಲಘಟ್ಟದಲ್ಲಿ ಪೊನ್ನಣ್ಣ ಅವರು ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆ ಅನನ್ಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಈ ಬಾರಿ ವಿದ್ಯಾರ್ಥಿ ವೇತನಕ್ಕಾಗಿ ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗಿತ್ತು. ಎಲ್ಲಾ ಅರ್ಜಿಗಳು ಸೂಕ್ತವಾಗಿದ್ದರೂ ತೀರಾ ಅಗತ್ಯವಾದುದನ್ನು ಮಾತ್ರ ಆಯ್ಕೆಗೊಳಿಸಲಾಗಿದೆ
(ಮೊದಲ ಪುಟದಿಂದ) ಎಂದು ಮಾಹಿತಿ ನೀಡಿದರಲ್ಲದೆ ವಿದ್ಯಾರ್ಥಿ ವೇತನದ ಪ್ರತಿ ರೂಪಾಯಿಯ ಮೌಲ್ಯಗಳು ಕೂಡ ಸದುಪಯೋಗ ವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಫಲಾನುಭವಿ ವಿದ್ಯಾರ್ಥಿನಿಯರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಶಿಕ್ಷಕ, ಅಜ್ಜಿಕುಟ್ಟೀರ ಗಾಜು ಪೊನ್ನಪ್ಪ, ಕೊಡಗು ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಜಿ. ಪಂ. ಮಾಜಿ ಸದಸ್ಯರಾದ ವಿ.ಪಿ. ಶಶಿಧರ್, ವಕೀಲ ವೀರಾಜಪೇಟೆಯ ಹೇಮಚಂದ್ರ ಮೊದಲಾದವರು ಮಾತನಾಡಿದರು.
ದ್ವಿತೀಯ ಪಿಯುಸಿ ಯಿಂದ ತೇರ್ಗಡೆಗೊಂಡು ಪದವಿ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ ಆಯ್ದ ಒಟ್ಟು ೭೦ ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರದಂತೆ ಒಟ್ಟು ರೂ.೭ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಕಳೆದ ಬಾರಿ ವಿದ್ಯಾರ್ಥಿ ವೇತನ ಪಡೆದ ೪೫ ವಿದ್ಯಾರ್ಥಿನಿಯರು ೨ನೇ ವರ್ಷದ ವಿದ್ಯಾರ್ಥಿ ವೇತನ ಪಡೆದಿದ್ದು, ೨೫ ವಿದ್ಯಾರ್ಥಿನಿಯರು ಮೊದಲನೆ ವರ್ಷದ ವಿದ್ಯಾರ್ಥಿ ವೇತನ ಪಡೆದರು.
ವೇದಿಕೆಯಲ್ಲಿ ಟಿ.ಶೆಟ್ಟಿಗೇರಿಯ ಸಿದ್ಧಾರೂಢ ಮಠದ ಸಿದ್ದು ಸ್ವಾಮೀಜಿ, ಚಂದಲೇ ಕಾರ್ಯಪ್ಪ, ಸಂಗೀತ ಪೂವಪ್ಪ, ಕಾಂಚನ್ ಪೊನ್ನಣ್ಣ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಿಸಿಸಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕಾಫಿ ಮಂಡಳಿ ಮಾಜಿ ಸದಸ್ಯೆ ತಾರಾ ಅಯ್ಯಮ್ಮ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ, ಜಿ.ಪಂ. ಮಾಜಿ ಸದಸ್ಯರಾದ ಬಿ.ಎನ್. ಪ್ರಥ್ಯು, ಸುನೀತಾ ಮಂಜುನಾಥ್, ಪೊಲೀಸ್ ಅಧಿಕಾರಿ ಗೋಪಾಲ್ ನಾಯಕ್, ಹಿರಿಯ ಮುಖಂಡ ನೆರವಂಡ ಉಮೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ದಿ. ಎ.ಕೆ. ಸುಬ್ಬಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಲಾಯಿತು.
ಹುದಿಕೇರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟ್ರಸ್ಟಿ ಎ.ಎಸ್. ನರೇನ್ ಕಾರ್ಯಪ್ಪ ಸ್ವಾಗತಿಸಿದರು. ಚಂಗುಲAಡ ಸೂರಜ್ ಮತ್ತು ದೇಶಿಕ ದೇಚಮ್ಮ ಕಾರ್ಯಕ್ರಮ ನಿರ್ವಹಿಸಿದರು. ಎ.ಎಸ್. ಟಾಟು ಮೊಣ್ಣಪ್ಪ ವಂದಿಸಿದರು.