ಮಡಿಕೇರಿ, ಆ. ೨೭: ಅಕ್ರಮವಾಗಿ ಜೀವಂತ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಎಸ್.ವಿ. ಜಗದೀಶ್ ಹಾಗೂ ಶೇಖ್ ಗೈಬೂಸ್ ಬಂಧಿತ ಆರೋಪಿಗಳು.
ತಾ. ೨೭ ರಂದು ಕುಶಾಲನಗರ ತಾಲೂಕಿನ, ಗುಡ್ಡೆಹೊಸೂರುನಿಂದ ಹಾರಂಗಿ ಕಡೆ ಹೋಗುವ ರಸ್ತೆಯ ಬೊಳ್ಳೂರು ಮಾದಾಪಟ್ಟಣ ರಸ್ತೆಯ ಜಂಕ್ಷನ್ ಬಳಿ ಅಕ್ರಮವಾಗಿ ಒಂದು ಜೀವಂತ ನಕ್ಷತ್ರ ಆಮೆಯನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ ದಾಳಿ ಮಾಡಿದ ಸಿಬ್ಬಂದಿಗಳು ಮಾಲು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂಧಿಸಿದ್ದಾರೆ.
ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ. ಶರತ್‌ಚಂದ್ರ ನಿರ್ದೇಶನ, ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ.ವಿಶ್ವನಾಥ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ. ಸಿ.ಯು. ಸವಿ, ಹೆಡ್‌ಕಾನ್ಸ್ಟೇಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ ಮತ್ತು ಕಾನ್ಸ್ಟೇಬಲ್‌ಗಳಾದ ಸ್ವಾಮಿ, ಮಂಜುನಾಥ ಇದ್ದರು.