ಪೊನ್ನಂಪೇಟೆ, ಆ. ೧೮: ಕೇಂದ್ರ ಸರ್ಕಾರದ "ನಶಾ ಮುಕ್ತ ಭಾರತ ಅಭಿಯಾನ" ಕಾರ್ಯಕ್ರಮವನ್ನು ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹಾಗೂ ಪ್ರಭಾರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಕೆ.ಆರ್. ರಾಜೇಶ್ ಮಾತನಾಡಿ ಚಟ ಎನ್ನುವುದು ಅಂತ್ಯದವರೆಗೂ ನಮ್ಮನ್ನು ಬಿಡುವುದಿಲ್ಲ. ವ್ಯಸನಗಳು ವ್ಯಕ್ತಿಯ ಆರೋಗ್ಯ, ಜೀವನ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುವುದರ ಜೊತೆಗೆ, ಆತ್ಮಹತ್ಯೆಯಂತಹ ಋಣಾತ್ಮಕ ಚಿಂತನೆಯತ್ತ ಮನಸ್ಸನ್ನು ದೂಡುತ್ತವೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಪುಸ್ತಕ ಓದುವ, ಕ್ರೀಡೆ ಹಾಗೂ ಯೋಗಭ್ಯಾಸದಂತಹ ಹವ್ಯಾಸಗಳನ್ನು ಬೆಳೆಸಿಕೊಂಡಲ್ಲಿ ಜೀವನವು ಸುಂದರವಾಗಿರುತ್ತದೆ. ದುಷ್ಟರಿಂದ ದೂರ ಇದ್ದು ಉತ್ತಮರ ಸಹವಾಸ ಮಾಡಿದರೆ ಒಳ್ಳೆಯ ದಾರಿಯಲ್ಲಿ ನಡೆದು, ಉತ್ತಮ ಪ್ರಜೆ ಎನಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರಾಂಶುಪಾಲೆ ಗೀತಾ ನಾಯ್ಡು "ನಶಾ ಮುಕ್ತ ಭಾರತ ಅಭಿಯಾನ"ದ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಂ.ಡಿ.ರಮ್ಯಾ, ಶಾಲಾ ಮುಖ್ಯ ಶಿಕ್ಷಕಿಯರಾದ ನಿವ್ಯ, ರೀನಾ, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿ ಮೇಘ ಮುತ್ತಮ್ಮ ಸ್ವಾಗತಿಸಿ, ಉಪನ್ಯಾಸಕಿ ಚಂದ್ರಿಕ ವಂದಿಸಿದರು.