ಕುಶಾಲನಗರ, ಆ. ೧೭: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಗೊಳಪಡುವ ಬಸವೇಶ್ವರನಗರದ ನಿವಾಸಿ, ಪಂಚಾಯ್ತಿ ಸದಸ್ಯ ಹಾಗೂ ಪತ್ರಕರ್ತ ಷಂಶುದ್ದೀನ್ ಅವರ ಮನೆ ಕುಸಿದು ಬಿದ್ದು, ಷಂಶುದ್ದೀನ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ತಡರಾತ್ರಿ ಘಟನೆ ನಡೆದಿದೆ.
ಷಂಶುದ್ದೀನ್ ಅವರು ರಾತ್ರಿ ಮಲಗಿದ್ದ ವೇಳೆ, ಮನೆಯ ಮುಂಭಾಗದ ಗೋಡೆ ಕುಸಿದು ಹೊರಗೆ ನಿಲ್ಲಿಸಿದ್ದ ಅವರ ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಎಚ್ಚರಗೊಂಡ ಷಂಶುದ್ದೀನ್ ಹೊರಗೆ ಧಾವಿಸಿ ಗಮನಿಸುವಷ್ಟರಲ್ಲಿ, ಉಳಿದರ್ಧ ಗೋಡೆ ಮಲಗುವ ಕೋಣೆ ಮೇಲೆ ಕುಸಿದು ಬಿದ್ದಿದೆ. ಷಂಶುದ್ದೀನ್ ಹಾಸಿಗೆಯಿಂದ ತಕ್ಷಣ ಎದ್ದ ಹಿನ್ನೆಲೆಯಲ್ಲಿ ಭಾರೀ ಅಪಾಯ ತಪ್ಪಿದಂತಾಗಿದೆ. ಮನೆಯಲ್ಲಿ ಅವರೊಬ್ಬರೇ ಇದ್ದರು. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಘದಿAದ ನೆರವು : ಷಂಶುದ್ದೀನ್ ಅವರಿಗೆ ತಕ್ಷಣಕ್ಕೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ಕ್ಲಬ್ನಿಂದ ತಲಾ ರೂ. ೧೦ ಸಾವಿರ ಮತ್ತು ಕುಶಾಲನಗರ ತಾಲೂಕು ಸಂಘದಿAದ ರೂ. ೫ ಸಾವಿರ ನೆರವು ನೀಡಲಾಗಿದೆ.
ಷಂಶುದ್ದೀನ್ ಕೂಡುಮಂಗಳೂರು ಪಂಚಾಯ್ತಿ ಸದಸ್ಯರಾಗಿದ್ದಾರೆ. ಆದರೆ, ಪಂಚಾಯ್ತಿ ಪ್ರತಿನಿಧಿಯ ಮನೆ ಕುಸಿದು ಅನಾಹುತವಾಗಿದ್ದರೂ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳು ಅಥವಾ ಸದಸ್ಯರು ಭೇಟಿ ನೀಡದೆ ನಿರ್ಲಕ್ಷö್ಯ ತೋರಿರುವ ಬಗ್ಗೆ ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತು ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ಚಂದ್ರಮೋಹನ್ ಸೇರಿದಂತೆ ಪತ್ರಕರ್ತರು, ಸ್ನೇಹಿತರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಮನೆ ಹಾನಿ ಹಿನ್ನೆಲೆಯಲ್ಲಿ ಸರ್ಕಾರದ ಮೂಲಕ ದೊರಕುವ ಎಲ್ಲಾ ಸವಲತ್ತುಗಳನ್ನು ನೀಡುವ ಬಗ್ಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಭರವಸೆ ನೀಡಿದ್ದಾರೆ.