ಸೋಮವಾರಪೇಟೆ, ಆ. ೧೭: ಕಾಫಿ ತೋಟದಲ್ಲಿದ್ದ ಕಿತ್ತಳೆ ಮರಕ್ಕೆ ಹತ್ತಿ ಕಿತ್ತಳೆಹಣ್ಣು ಕುಯ್ಯುತ್ತಿದ್ದ ಸಂದರ್ಭ ಆಕ್ಮಸಿಕವಾಗಿ ಬಿದ್ದು ತೀವ್ರ ಗಾಯಗೊಂಡಿದ್ದ ಕೃಷಿಕರೋರ್ವರು ಚಿಕಿತ್ಸೆ ಫಲಿಸದೆ ದುರ್ಮರಣಕ್ಕೀಡಾದ ಘಟನೆ ಸಮೀಪದ ಕೂತಿ ಗ್ರಾಮದಲ್ಲಿ ನಡೆದಿದೆ.
ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂತಿ ಗ್ರಾಮ ನಿವಾಸಿ, ಕೃಷಿಕ ಹೆಚ್.ಜೆ. ಮಾದಪ್ಪ ಎಂಬವರೇ ಸಾವಿಗೀಡಾದವರು. ಕಳೆದ ೧೫ ದಿನಗಳ ಹಿಂದೆ ತೋಟದಲ್ಲಿ ಕಿತ್ತಳೆಹಣ್ಣು ಕುಯ್ಯುವ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು.
ಘಟನೆಯಿಂದ ಮಾದಪ್ಪ ಅವರ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದರು. ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಕಳೆದ ಒಂದು ವಾರದ ಹಿಂದೆ ಮನೆಗೆ ವಾಪಸ್ ಕರೆತರಲಾಗಿತ್ತು.
ಮೊನ್ನೆ ದಿನ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು. ಮೃತರು ಪತ್ನಿ ಲೀಲಾವತಿ ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದಾರೆ.