ಕಣಿವೆ, ಆ. ೮: ಹಾರಂಗಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಶಿರಂಗಾಲ, ತೊರೆನೂರು ಹಾಗೂ ಹೆಬ್ಬಾಲೆ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಬಾರಿಯ ಖಾರೀಫ್ ಬೆಳೆ ಭತ್ತದ ನಾಟಿ ಕಾರ್ಯ ಆರಂಭವಾಗಿದೆ.
ಭತ್ತದ ಬೀಜದ ಬಿತ್ತನೆ ಮಾಡಿದ ೨೧ ರಿಂದ ೩೦ ದಿನಗಳೊಳಗೆ ನಾಟಿಗೆ ಸಿದ್ದಗೊಳ್ಳುವ ಭತ್ತದ ಸಸಿ ಮಡಿಗಳನ್ನು ನಾಟಿ ಮಾಡುವಲ್ಲಿ ಕೃಷಿಕರು ಮುಂದಾಗಿದ್ದಾರೆ.
ಆದಾಯಕ್ಕಿAತ ಖರ್ಚು ಜಾಸ್ತಿ: ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಆದಾಯಕ್ಕಿಂತ ದುಪ್ಪಟ್ಟು ವೆಚ್ಚ ತಗಲುವ ಹಿನ್ನೆಲೆಯಲ್ಲಿ ಬಹುತೇಕ ರೈತಾಪಿಗಳು ಭತ್ತದ ಬೆಳೆ ಬೆಳೆಯುವಲ್ಲಿ ನಿರಾಸಕ್ತಿ ತೋರುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದೆ.
ಒಂದು ಎಕರೆ ಪಾಳು ಗದ್ದೆಯಲ್ಲಿ ಭತ್ತದ ಫಸಲು ತೆಗೆಯಲು ಬರೋಬ್ಬರಿ ೨೫ ರಿಂದ ೩೦ ಸಾವಿರ ಖರ್ಚಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರದ ಮೇಲಿನ ದುಬಾರಿ ದರ, ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಯಂತ್ರೋಪಕರಣಗಳ ಮೊರೆ ಹೋಗುತ್ತಿರುವುದು, ಬೆಳೆದ ಕೃಷಿ ಫಸಲಿಗೆ ಮಾರುಕಟ್ಟೆಯಲ್ಲಿ ಪೂರಕವಾದ ಬೆಲೆ ದೊರಕದೇ ಇರುವುದು ಸೇರಿದಂತೆ ಹಲವಾರು ಕಾರಣಗಳಿಂದ ಕೃಷಿಕರು ಕೃಷಿಯತ್ತ ನಿರಾಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ.
ಭತ್ತದ ಫಸಲಿನ ಸಿದ್ಧತೆ
ಒಂದು ಎಕರೆ ಭೂಮಿಯಲ್ಲಿ ಭತ್ತ ಬೆಳೆಯಲು ಬೀಜ ಬಿತ್ತನೆಗೆ ಕನಿಷ್ಟ ರೂ. ೧೫೦೦ ವೆಚ್ಚ ತಗಲುತ್ತದೆ. ಬಳಿಕ ಪಾಳು ಬಿದ್ದ ಗದ್ದೆಯನ್ನು ಉಳುಮೆ ಮಾಡಲು ಮೊದಲ ಬಾರಿ ಟ್ರಾಕ್ಟರ್ ಉಳುಮೆಗೆ ಕನಿಷ್ಟ ರೂ. ೨೫೦೦, ಉಳುಮೆ ಮಾಡಿದ ಗದ್ದೆಯ ಬದುಗಳನ್ನು ಸಿದ್ಧಗೊಳಿಸಿ ಬದು ಕಟ್ಟಲು ರೂ. ೨೦೦೦, ಬಳಿಕ ನಾಟಿಗೆ ಮುನ್ನಾ ಟ್ರಾö್ಯಕ್ಟರ್‌ನಿಂದ ರೋಟ್ರಿ ಹೊಡೆಸಲು ಕನಿಷ್ಟ ರೂ. ೩೦೦೦ ನಂತರ ಜೋಡಿ ಎತ್ತುಗಳಿಂದ ಮರ ಹೊಡೆದು ಗದ್ದೆಯಲ್ಲಿ ನೀರು ನಿಲ್ಲುವಂತೆ ಸಮತಟ್ಟುಗೊಳಿಸಲು ರೂ. ೨೦೦೦, ಗದ್ದೆಯ ನಾಟಿಗೆ ಒಂದು ಎಕರೆಗೆ ರೂ. ೬೦೦೦ ಹಾಗೆಯೇ ನಾಟಿ ಸಂದರ್ಭ ಗದ್ದೆಗೆ ಹಾಕುವ ಎರಡು ಚೀಲ ರಸಗೊಬ್ಬರಕ್ಕೆ ರೂ. ೪೦೦೦, ನಾಟಿ ಕಳೆದ ಕೆಲದಿನಗಳ ಬಳಿಕ ಕಳೆ ಬರದಂತೆ ಕಳೆನಾಶಕ ಅಳವಡಿಸಲು ರೂ. ೧೦೦೦, ಬಳಿಕ ಗದ್ದೆಯೊಳಗೆ ಕಳೆ ಕೈ ಆಡಿಸಲು ರೂ. ೧೫೦೦ ನಂತರ ಎರಡನೇ ಬಾರಿ ರಸಗೊಬ್ಬರ ಹಾಕಲು ರೂ. ೧೫೦೦, ನಂತರ ಬೆಳೆಗೆ ಬೆಂಕಿ ರೋಗ ಬಾಧಿಸದಂತೆ ಅಥವಾ ಕಾಂಡಕೊರಕ ಹುಳು ಬಾಧೆ ತಪ್ಪಿಸಲು ರಾಸಾಯನಿಕ ಸಿಂಪಡಣೆಗೆ ರೂ. ೧೫೦೦ ವ್ಯಯವಾಗುತ್ತದೆ.
ಹಾಗೆಯೇ ಬೆಳೆ ಬಂದ ಬಳಿಕ ಅದನ್ನು ಕಟಾವು ಮಾಡಲು ಒಂದು ಎಕರೆಗೆ ಕನಿಷ್ಟ ೧೦ ಮಂದಿ ಕೂಲಿ ರೂ. ೫೦೦೦, ಕಣವನ್ನು ಸಿದ್ಧಗೊಳಿಸಿ ಕಣದಲ್ಲಿ ಭತ್ತ ಬಡಿದು ಒಕ್ಕಲುತನ ಮಾಡಲು ೧೨೦೦೦ ರೂ, ಖರ್ಚು ಬರುತ್ತದೆ ಎಂದು ಕೃಷಿಕ ಮಣಜೂರಿನ ಮಂಜುನಾಥ ಹಾಗೂ ಕರುಣಾಕರ ಹೇಳುತ್ತಾರೆ.
ಒಂದು ಎಕರೆ ಗದ್ದೆಯಲ್ಲಿ ಕಷ್ಟಪಟ್ಟು ಹಣ ವ್ಯಯಿಸಿ ಬೆಳೆದ ಭತ್ತದ ಫಸಲಿನ ಇಳುವರಿ ಚೆನ್ನಾಗಿ ಬಂದರೆ ಎಕರೆಯೊಂದಕ್ಕೆ ೨೦ ಕ್ವಿಂಟಾಲ್ ಬಂದರೆ ಅದು ನಮ್ಮ ಅದೃಷ್ಟ ಎನ್ನುವ ಬೆಳೆಗಾರ ಮಂಜುನಾಥ್, ಭತ್ತದ ಫಸಲಿಗೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ ಕನಿಷ್ಟ ರೂ. ೧೫೦೦ ಗಳಿಂದ ಗರಿಷ್ಠ ರೂ. ೧೭೦೦ ಇರುತ್ತದೆ. ಆದರೆ ನಾವು ಖರ್ಚು ಮಾಡಿ ನಾಲ್ಕುವರೆ ತಿಂಗಳು ಹಾಕುವ ಶ್ರಮಕ್ಕೆ ಏನೇನು ಸಾಲದು.ಹಾಗಾಗಿ ಬಹಳಷ್ಟು ಮಂದಿ ಭತ್ತದ ನಾಟಿಗೆ ಮುಂದಾಗಲ್ಲ. ಆದರೆ ಇರುವ ಫಲವತ್ತಾದ ಕೃಷಿ ಭೂಮಿ ಪಾಳುಬಿಟ್ಟರೆ ಜನ ನೆಗಾಡ್ತಾರಲ್ಲ ಅಂತಾನಾದ್ರು ನಾವು ನಾಟಿ ಮಾಡಲು ಮುಂದಾಗ್ತೇವೆ ಎನ್ನುತ್ತಾರೆ. ವರದಿ: ಕೆ.ಎಸ್. ಮೂರ್ತಿ