ನಾಪೋಕ್ಲು, ಆ. ೬: ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದರೆ ಮಾತ್ರ ಶೈಕ್ಷಣಿಕವಾಗಿ ಏಳಿಗೆಯನ್ನು ಪಡೆಯಲು ಸಾಧ್ಯ ಎಂದು ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೇಟೋಳಿರ ರತ್ನಾ ಚರ್ಮಣ್ಣ ಕಿವಿಮಾತು ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹೊಸಬರ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಮಕ್ಕಳು ಕಲಿಯುವ ಸಂದರ್ಭದಲ್ಲಿ ಬೇಡದ ವಿಚಾರಗಳತ್ತ ಗಮನ ಹರಿಸಬಾರದು. ಪದವಿಪೂರ್ವ ಹಂತದಲ್ಲಿ ಶೈಕ್ಷಣಿಕವಾಗಿ ಭದ್ರ ಬುನಾದಿ ಹಾಕಿಕೊಂಡರೆ ಮುಂದೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮೂರ್ನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ವಹಿಸಿದ್ದರು. ವೇದಿಕೆ ಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಿ.ಸಿ. ಸುಬ್ರಮಣಿ, ನಿರ್ದೇಶಕ ಎನ್.ಪಿ. ಮಾದಪ್ಪ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ ಇದ್ದರು.

ಈ ಸಂದರ್ಭ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೯೮.೧ ರಷ್ಟು ಅಂಕಗಳನ್ನು ಗಳಿಸುವದರ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ ಎಂಟನೇ ಸ್ಥಾನ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ಹರ್ಷಿತಾ ಎಂ.ಸಿ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.