ಶನಿವಾರಸಂತೆ, ಆ. ೬: ಸಮೀಪದ ಕೊಡ್ಲಿಪೇಟೆಯ ವಾಣಿಜ್ಯೋದ್ಯಮಿಗಳ ಸಂಘದ ವತಿಯಿಂದ ಜಿ.ಎಸ್.ಟಿ. ಹಿಂಪಡೆಯಲು, ಪಡಿತರ ಚೀಟಿಗೆ ಸೀಮೆಎಣ್ಣೆ ವಿತರಿಸಲು ಹಾಗೂ ಹೋಬಳಿ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿಪಡಿಸುವಂತೆ ಕೋರಿ ಕಂದಾಯ ಇಲಾಖೆ ಉಪತಹಶೀಲ್ದಾರ್ ಪುರುಷೋತ್ತಮ್ ಹಾಗೂ ಕಂದಾಯ ಪರಿವೀಕ್ಷಕ ಮನುಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿತು. ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ಕೊಡ್ಲಿಪೇಟೆ ಜಿಲ್ಲೆಯ ಗಡಿಭಾಗವಾಗಿದ್ದು, ಅಭಿವೃದ್ಧಿ ವಂಚಿತವಾಗಿ ಸಮಸ್ಯೆಗಳ ಆಗರವಾಗಿದೆ. ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಕಾಡು ಪ್ರಾಣಿಗಳ ಜೊತೆ ವಿಷಜಂತುಗಳ ಕಾಟವೂ ಇದೆ. ವಿದ್ಯುತ್ ಕೈಗೊಟ್ಟಾಗ ರಾತ್ರಿ ಕತ್ತಲಲ್ಲಿ ತಿರುಗಾಡಲು, ಮನೆಯಲ್ಲಿ ಒಲೆ ಹಚ್ಚಲು ಹಾಗೂ ಬೆಳಕಿಗಾಗಿ ಸೀಮೆಎಣ್ಣೆ ಅಗತ್ಯವಾಗಿ ಬೇಕು. ಆದರೆ ೨ ವರ್ಷಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ಸೀಮೆಎಣ್ಣೆ ವಿತರಣೆ ಇಲ್ಲ. ಬೇರೆ ಜಿಲ್ಲೆಗಳಲ್ಲಿ ಸೀಮೆಎಣ್ಣೆ ವಿತರಣೆ ಇದೆ. ಕೊಡಗಿಗೆ ಏಕೆ ಈ ತಾರತಮ್ಯ? ಈ ಜಿಲ್ಲೆ ಕರ್ನಾಟಕಕ್ಕೆ ಸೇರಿಲ್ಲವೇ? ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ. ಕೊಡ್ಲಿಪೇಟೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ರಸ್ತೆಗಳು ಗುಂಡಿಬಿದ್ದು ಹಾಳಾಗಿದೆ. ಈವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ. ಜಿಎಸ್‌ಟಿ ೫/೨ ನಿಂದ ಸಣ್ಣ ವರ್ತಕರಿಗೆ, ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಗುತ್ತಿದೆ. ಸೀಮೆಎಣ್ಣೆ ವಿತರಣೆ, ರಸ್ತೆಗಳ ದುರಸ್ತಿ ಹಾಗೂ ಜಿಎಸ್‌ಟಿ ಬಗ್ಗೆ ಮರುಪರಿಶೀಲನೆಯಾಗಬೇಕು ಎಂದು ಸಂಘದ ಸ್ಥಾನೀಯ ಸಮಿತಿ ಗೌರವಾಧ್ಯಕ್ಷ ಹೆಚ್.ಸಿ. ಯತೀಶ್ ಕುಮಾರ್, ಅಧ್ಯಕ್ಷ ಬಿ.ಕೆ. ಯತೀಶ್, ಕಾರ್ಯದರ್ಶಿ ಹೆಚ್.ಎಂ. ದಿವಾಕರ್, ಉಪಾಧ್ಯಕ್ಷ ಡಿ.ವಿ. ದಿನೇಶ್, ಹೆಚ್.ಜೆ. ಪ್ರವೀಣ್, ನಿರ್ದೇಶಕರಾದ ಜಿ.ಆರ್. ಸುಬ್ರಮಣ್ಯ, ವಹಾಬ್, ಮಂಗಲ್ ಜಿ ಹಾಗೂ ಇತರ ಪದಾಧಿಕಾರಿಗಳು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.