ಗೋಣಿಕೊಪ್ಪ / ಕುಶಾಲನಗರ, ಆ. ೬: ನಾಡಹಬ್ಬ ದಸರಾಕ್ಕೆ ಇನ್ನೂ ೨ ತಿಂಗಳು ಬಾಕಿ ಇದೆ. ಆದರೆ, ವೈಭವಯುತ ದಸರಾಕ್ಕೆ ರಾಜಕಳೆ ತರುವ ಜಂಬೂಸವಾರಿಗೆ ಗಜಪಡೆಗಳು ಪಯಣ ಬೆಳೆಸಿವೆ. ಜಿಲ್ಲೆಯಿಂದ ೯ ಆನೆಗಳು ಗಜಪಯಣದಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಮೊದಲ ಹಂತವಾಗಿ ಜಿಲ್ಲೆಯ ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರಗಳಿಂದ ಒಟ್ಟು ಆರು ಆನೆಗಳನ್ನು ಬೀಳ್ಕೊಡಲಾಯಿತು.

ದುಬಾರೆಯಿಂದ ೨, ಮತ್ತಿಗೋಡು ಸಾಕಾನೆ ಶಿಬಿರದಿಂದ ೪ ಆನೆಗಳಿಗೆ ಸಂಪ್ರದಾಯವಾಗಿ ಪೂಜೆ ಸಲ್ಲಿಸಿ ಯಾವುದೇ ಸಮಸ್ಯೆಯಾಗದಂತೆ ಪ್ರಾರ್ಥಿಸಿ ಆನೆಗಳನ್ನು ಲಾರಿಗೆ ಏರಿಸಿ ಹುಣಸೂರು ತಾಲೂಕಿನ ವೀರನಹೊಸಳ್ಳಿಗೆ ಕಳುಹಿಸಲಾಯಿತು. ಇಲ್ಲಿಂದ ತಾ. ೭ ರಂದು (ಇಂದು) ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಗಜಪಡೆಯನ್ನು ಕೊಂಡೊಯ್ಯಲಾಗುವುದು. ದುಬಾರೆಯ ೨ನೇ ತಂಡದ ಆನೆಗಳಾದ ಗೋಪಿ, ಶ್ರೀರಾಮ ಹಾಗೂ ಸುಗ್ರೀವನನ್ನು ೧೦ ದಿನಗಳ ಬಳಿಕ ಕಳುಹಿಸಲಾಗುವುದು.

ಮೂರು ತಂಡಗಳು

ದಸರಾದಲ್ಲಿ ಭಾಗವಹಿಸಲಿರುವ ಒಟ್ಟು ೧೭ ಆನೆಗಳನ್ನು ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ಮೊದಲ ತಂಡದಲ್ಲಿ ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು (೫೭), ಭೀಮ (೨೨), ದುಬಾರೆಯ ವಿಕ್ರಮ (೪೪), ಧನಂಜಯ (೪೪) ಸೇರಿ ಬಳ್ಳೆ ಶಿಬಿರದಿಂದ ಅರ್ಜುನ (೬೩), ಕಾವೇರಿ (೪೫), ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ರಾಮಾಪುರ ಶಿಬಿರದ ಚೈತ್ರ (೪೯), ಲಕ್ಷಿö್ಮ (೨೧) ಆನೆಗಳು ಇರಲಿವೆ.

(ಮೊದಲ ಪುಟದಿಂದ) ಇವು ಜಂಬೂ ಸವಾರಿಯ ಮುಂಚೂಣಿ ಯಲ್ಲಿರಲಿದೆ.

೨ನೇ ತಂಡದಲ್ಲಿ ಮತ್ತಿಗೋಡು ಶಿಬಿರದ ಗೋಪಾಲಸ್ವಾಮಿ (೩೯), ದುಬಾರೆಯ ಗೋಪಿ (೪೧), ಶ್ರೀರಾಮ (೪೦), ವಿಜಯ (೬೩), ರಾಮಪುರದ ಪಾರ್ಥಸಾರಥಿ (೧೮), ಜೊತೆಗೆ ಬದಲಿ ವ್ಯವಸ್ಥೆಗೆ ಹೆಚ್ಚುವರಿ ದುಬಾರೆಯ ಸುಗ್ರೀವ (೪೦), ರಾಮಪುರದ ಕುಂತಿ (೩೬), ಗಣೇಶ (೩೯) ಆನೆಗಳು ಭಾಗವಹಿಸಲಿವೆ.

ಈಗಾಗಲೇ ವೀರನಹೊಸಳ್ಳಿಗೆ ತೆರಳಿದ ಆನೆಗಳು ಸೇರಿದಂತೆ ಇತರೆಡೆಗಳಿಂದ ಬಂದ ಆನೆಗಳಿಗೆ ಪೂಜೆ ಸಲ್ಲಿಸಿ ತಾ. ೭ ರ ಬೆಳಿಗ್ಗೆ ಮೈಸೂರಿಗೆ ಕಳುಹಿಸಲಾಗುತ್ತಿದೆ. ಅಶೋಕಪುರಂನ

ಅರಣ್ಯ ಭವನದಲ್ಲಿ ಆನೆಗಳ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ತಾ. ೧೦ ರಂದು ರಾಜಮನೆತನ ಹಾಗೂ ಸರಕಾರದಿಂದ ಅದ್ಧೂರಿಯಾಗಿ ಆನೆಗಳನ್ನು ಬರಮಾಡಿಕೊಳ್ಳ ಲಾಗುತ್ತದೆ. ಸಾಂಪ್ರದಾಯಿಕವಾಗಿ ಆನೆಗಳನ್ನು ಸಿಂಗರಿಸಿ ನಾದಸ್ವರ, ಮಂತ್ರಘೋಷಗಳನ್ನು ಮೊಳಗಿಸಿ, ಅರ್ಚಕರಿಂದ ಆನೆಗಳಿಗೆ ಪೂಜೆ ನೆರವೇರಿ ಅಧಿಕೃತವಾಗಿ ದಸರಾದ ಅಂಗವಾಗಿ ನಡೆಯುವ ಮೊದಲ ಕಾರ್ಯಕ್ರಮಕ್ಕೆ ‘ಗಜಪಡೆ ಪ್ರವೇಶ’ ಮುನ್ನಡಿ ಬರೆಯಲಿದೆ.

ಆನೆಗಳೊಂದಿಗೆ ಹೊರಟ ಕಾವಾಡಿಗಳು, ಮಾವುತರು

ಆನೆ ಮಾವುತರು ಹಾಗೂ ಕಾವಾಡಿಗರ ಬೇಡಿಕೆ ಈಡೇರಿಸುವ ಭರವಸೆ ದೊರೆತ ಹಿನ್ನೆಲೆ ಸಂತಸದಿAದ ಆನೆಗಳೊಂದಿಗೆ ಪಯಣ ಬೆಳೆಸಿದರು.

ತಿತಿಮತಿ, ನಾಗರಹೊಳೆ ವನ್ಯಜೀವಿ ವಲಯದ ಮತ್ತಿಗೋಡು ಶಿಬಿರದ ಅಂಬಾರಿ ಹೊರುವ ಅಭಿಮನ್ಯು, ಭೀಮ, ಗೋಪಾಲಸ್ವಾಮಿ, ಜೊತೆಗೆ ಚೊಚ್ಚಲ ಬಾರಿಗೆ ೩೯ ವರ್ಷದ ಮಹೇಂದ್ರ ಕೂಡ ಜಂಬೂ ಸವಾರಿಯಲ್ಲಿ ಭಾಗವಹಿಸಲು ಉತ್ಸುಕದಲ್ಲಿದೆ. ಅಭಿಮನ್ಯುವಿನ ಮಾವುತನಾಗಿ ವಸಂತ, ಕಾವಾಡಿ ಜೆ.ಕೆ. ರಾಜು, ಭೀಮನ ಮಾವುತನಾಗಿ ಗುಂಡಣ್ಣ, ಕಾವಾಡಿ ನಂಜುAಡಸ್ವಾಮಿ, ಗೋಪಾಲಸ್ವಾಮಿ ಮಾವುತನಾಗಿ ಸುಜನ, ಕಾವಾಡಿ ಮಂಜು, ಮಹೇಂದ್ರನ ಮಾವುತನಾಗಿ ಮಲ್ಲಿಕಾರ್ಜುನ, ಕಾವಾಡಿ ರಾಜಣ್ಣ ಸೇರಿ ಅವರ ಕುಟುಂಬ ತೆರಳಿದೆ.

ಕಾವೇರಿ ಮತ್ತು ಧನಂಜಯ ಆನೆಗಳ ಮಾವುತರಾದ ಜೆ.ಕೆ.ಡೋಬಿ, ಕಾವಾಡಿಗರಾದ ಭಾಸ್ಕರ, ಮಣಿ, ರಂಜನ್ ಮತ್ತು ಕುಟುಂಬ ಸದಸ್ಯರು ತೆರಳಿದ್ದಾರೆ.

ಆನೆಗಳಿಗೆ ಬೀಳ್ಕೊಡುಗೆ

ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಲಿರುವ ಆನೆಗಳಿಗೆ ಮತ್ತಿಗೋಡು ಹಾಗೂ ದುಬಾರೆಯಿಂದ ಸಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ದುಬಾರೆ ಶಿಬಿರದಲ್ಲಿ ಮಡಿಕೇರಿ ಉಪವಿಭಾಗ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ್ ಮತ್ತು ಉಪವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಹಾಗೂ ಸಿಬ್ಬಂದಿಗಳು ಈ ಸಂದರ್ಭ ಇದ್ದರು.

ಮತ್ತಿಗೋಡು ಆನೆ ಶಿಬಿರದಿಂದ ಗಜಪ್ರಯಾಣಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಮತ್ತಿಗೋಡು ವಲಯ ಅರಣ್ಯಾಧಿಕಾರಿ ಹನುಮಂತರಾಜು, ವನಪಾಲಕಿ ಶಾರದಮ್ಮ, ಮೇಲ್ವಿಚಾರಕ ಶರೀಫ್, ಅರಣ್ಯ ಸಿಬ್ಬಂದಿಗಳು, ಮಾವುತರು, ಕಾವಾಡಿಗಳ ಕುಟುಂಬಸ್ಥರು ಹಾಜರಿದ್ದರು.

ರಾಜಾತಿಥ್ಯ

ಕಾಡಿನಲ್ಲಿದ್ದ ಸಾಕಾನೆಗಳು ಇದೀಗ ನಾಡಿಗೆ ತೆರಳಿದ್ದು, ದಸರಾ ಮುಗಿಯುವ ತನಕ ಆನೆಗಳಿಗೆ ರಾಜಾತಿಥ್ಯ ದೊರಕಲಿದೆ. ಆನೆಗಳಿಗೆ ಅಗತ್ಯ ಆಹಾರ ಒದಗಿಸಿ ಅದನ್ನು ಆರೈಕೆ ಮಾಡಿ ದಸರಾದಲ್ಲಿ ಭಾಗವಹಿಸಲು ತಾಲೀಮು ನೀಡಲಾಗುತ್ತದೆ.

ಮೈಸೂರು ರಾಜಮನೆತನವಾದ ಒಡೆಯರ್ ಕುಟುಂಬ ಮಾವುತರು ಹಾಗೂ ಕಾವಾಡಿಗರಿಗೆ ಉಡುಗೊರೆ ನೀಡುವುದು ವಾಡಿಕೆಯಾಗಿದೆ. ಸರಕಾರ ಆನೆಗಳ ನಿರ್ವಹಣೆಗೆ ಅನುದಾನ ಮೀಸಲಿಟ್ಟಿರುತ್ತದೆ.

- ಎನ್.ಎನ್. ದಿನೇಶ್, ಎಂ.ಎನ್. ಚಂದ್ರಮೋಹನ್