ಪೊನ್ನಂಪೇಟೆ, ಆ. ೬: ಪತಿಯನ್ನು ಕಳೆದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಪೊನ್ನಂಪೇಟೆಯ ಜನತಾ ಕಾಲೋನಿ ನಿವಾಸಿ ಲೀಲಾ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಸಾಶನ ಮಂಜೂರಾಗಿದೆ. ಇವರ ಪತಿ ಇತ್ತೀಚೆಗೆ ಅನಾರೋಗ್ಯದಿಂದ ಮರಣ ಹೊಂದಿದ್ದು, ಮಕ್ಕಳಿಂದ ಅವರ ಜೀವನ ನಿರ್ವಹಣೆಗೆ ಯಾವುದೇ ಸಹಕಾರವಿರಲಿಲ್ಲ. ವಾಸ ಮಾಡಲು ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅನಾರೋಗ್ಯದಿಂದ ಬಳಲುತಿದ್ದ ಲೀಲಾ ಅವರ ಪರಿಸ್ಥಿತಿ ಬಗ್ಗೆ ತಿಳಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಧರ್ಮಸ್ಥಳ ಧರ್ಮಾಧಿಕಾರಿಯವರಿಗೆ ಸಹಾಯಕ್ಕಾಗಿ ಮನವಿಯನ್ನು ಸಲ್ಲಿಸಿದ್ದ ಹಿನ್ನೆಲೆ ಲೀಲಾ ಅವರಿಗೆ ೧ ಸಾವಿರ ರೂಪಾಯಿ ಮಾಸಾಶನ ಮಂಜೂರಾಗಿದೆ. ಮಂಜೂರಾತಿ ಪತ್ರ ಮತ್ತು ಹಣವನ್ನು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ ವಿತರಿಸಿದರು.
ಈ ಸಂದರ್ಭ ಪೊನ್ನಂಪೇಟೆ ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ನರಸಿಂಹಮೂರ್ತಿ, ಹಿರಿಯರಾದ ದೊರೆಸ್ವಾಮಿ, ಪೊನ್ನಂಪೇಟೆ ಸ್ಥಳೀಯ ಸೇವಾ ಪ್ರತಿನಿಧಿ ಗೌರಿ, ಅರುವತ್ತೊಕ್ಲು ಸೇವಾ ಪ್ರತಿನಿಧಿ ರೋಹಿಣಿ ಇದ್ದರು.