ನಾಪೋಕ್ಲು, ಆ. ೬: ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಗಾಳಿಯ ಕಾರಣದಿಂದ ನಾಲ್ಕುನಾಡು ವ್ಯಾಪ್ತಿಯಲ್ಲಿ ಕಾಫಿ, ಕಾಳುಮೆಣಸು, ಅಡಿಕೆ ಫಸಲುಗಳು ಸಂಪೂರ್ಣವಾಗಿ ನಾಶವಾಗಿದ್ದು ಸರಕಾರ ಬೆಳೆಗಾರರಿಗೆ ಶೀಘ್ರವಾಗಿ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕೆಂದು ನಾಲ್ಕುನಾಡು ರೈತ ಸಂಘ ಒತ್ತಾಯಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಬಿದ್ದಾಟಂಡ ಜಿನ್ನು ನಾಣಯ್ಯ, ಕಾಫಿ ಮಂಡಳಿ ಅಧಿಕಾರಿಗಳು ಬೆಳೆಗಾರರ ತೋಟಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ನಷ್ಟದ ಬಗ್ಗೆ ವರದಿ ನೀಡಬೇಕು. ಕಾಫಿ ಬೆಳೆಗಾರರ ಸಂಕಷ್ಟಗಳ ಬಗ್ಗೆ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ವಿಧಾನ ಸಭೆಯ ಅಧಿವೇಶನದಲ್ಲಿ ಸರಕಾರಕ್ಕೆ ಮನವರಿಕೆ ಮಾಡಬೇಕು. ಎಕರೆಗೆ ಒಂದು ಲಕ್ಷ ರೂಪಾಯಿಗಳಂತೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮತ್ತೋರ್ವ ಸದಸ್ಯ ಎನ್.ಎಸ್. ಉದಯಶಂಕರ್ ಮಾತನಾಡಿ, ಬೆಳೆಗಾರರು ಸಂಕಷ್ಟದಲ್ಲಿರುವ ಕಾರಣ ಸರಕಾರ ಬೆಳೆ ಸಾಲ ಮನ್ನಾ ಮಾಡಬೇಕು. ದೀರ್ಘಾವಧಿ ಸಾಲ ಮರುಪಾವತಿಯನ್ನು ಒಂದು ವರ್ಷಗಳ ಮಟ್ಟಿಗೆ ಮುಂದೂಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಪಟ್ರಪಂಡ ಮೋಹನ್ ಮುದ್ದಪ್ಪ, ಕುಂಡ್ಯೋಳAಡ ಕಾಶಿ ತಮ್ಮಯ್ಯ, ಕೇಟೋಳಿರ ರೆಮ್ಮಿ, ಪುಲ್ಲೇರ ದೀಪಕ್, ಬಿದ್ದಾಟಂಡ ಸಂಪತ್, ನೆಡುಮಂಡ ಕೃತಿ, ಅಚ್ಚಾಂಡಿರ ಮಂದಣ್ಣ ಇದ್ದರು.