ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮುಂದಿನ ೩ ದಿನ ತೀವ್ರ ಮಳೆ

ತಿರುವನಂತಪುರA, ಆ. ೪: ಮುಂದಿನ ಮೂರು ದಿನಗಳವರೆಗೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಲಿದ್ದು, ನಂತರ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ತಾ. ೬ ರಿಂದ ಗುಜರಾತ್, ಪೂರ್ವ ರಾಜಸ್ಥಾನ, ಮಹಾರಾಷ್ಟç, ಗೋವಾ, ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ಮಧ್ಯೆ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಲ್ಲಂ, ಮಲಪ್ಪುರಂ, ಕೋಯಿಕ್ಕೋಡ್, ವಯನಾಡು ಮತ್ತು ಕಾಸರಗೋಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಬಂಗಾಳಕೊಲ್ಲಿಯ ತಮಿಳುನಾಡು ಕರಾವಳಿ ಭಾಗದಲ್ಲಿ ಚಂಡಮಾರುತ ಬೀಸುತ್ತಿರುವುದೇ ಮಳೆ ಹೆಚ್ಚಾಗಲು ಕಾರಣ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕೇರಳದಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದಾಗಿ ಪೆರಿಂಗಲ್ಕುತ್ತು ಅಣೆಕಟ್ಟಿನ ನಾಲ್ಕನೇ ಷಟರನ್ನು ತೆರೆಯಲಾಗಿದೆ. ಇದರ ಪರಿಣಾಮವಾಗಿ ಚಾಲಕುಡಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಅಧಿಕಾರಿಗಳು ನದಿ ತೀರದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ರಸ್ತೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಪ್ರತಿಕೂಲ ಹವಾಮಾನದ ಕಾರಣದಿಂದ ಅಲಪ್ಪುಳ, ಇಡುಕ್ಕಿ, ಪತ್ತನಂತಿಟ್ಟ, ಎರ್ನಾಕುಲಂ ಮತ್ತು ಕೊಟ್ಟಾಯಂನಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಮಹಾತ್ಮಗಾಂಧಿ ವಿಶ್ವವಿದ್ಯಾಲಯವು ಗುರುವಾರ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಭೂಕುಸಿತ ಪೀಡಿತ ಎತ್ತರದ ಶ್ರೇಣಿಗಳು, ನದಿ ದಡಗಳು, ತಗ್ಗು ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಿದೆ. ನದಿ ತೀರಗಳಲ್ಲಿ ರಾತ್ರಿ ಪ್ರಯಾಣ ಮಾಡದಂತೆ ಮತ್ತು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

‘ದೇಶದ ಅಭಿವೃದ್ಧಿಯಲ್ಲಿ ಅನೇಕ ಪ್ರಧಾನಿಗಳ ಶ್ರಮ ಇದೆ': ಅಮಿತ್ ಶಾ

ಬೆಂಗಳೂರು, ಆ. ೪: ಕೇಂದ್ರ ಗೃಹ ಸಚಿವ ಅಮಿತ ಷಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಕಲ್ಪದಿAದ ಸಿದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, “ಅಜಾದಿ ಕಾ ಅಮೃತ್ ಮಹೋತ್ಸವ ಮಾಡುವ ಉದ್ದೇಶ ನಮ್ಮ ಚಿಕ್ಕ ಮಕ್ಕಳಿಗೆ ದೇಶದ ಸ್ವಾತಂತ್ರ‍್ಯ ಹೋರಾಟದ ಬಗ್ಗೆ ತಿಳಿಯಬೇಕು. ೭೫ ವರ್ಷದಲ್ಲಿ ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಕ್ರಾಂತಿಕಾರಿ ಅಭಿವೃದ್ಧಿಯ ಬಗ್ಗೆ ವಿಶ್ವಕ್ಕೆ ತಿಳಿಸುವ ಕೆಲಸ ಮಾಡಬೇಕು. ೭೫ನೇ ವರ್ಷದಲ್ಲಿ ಸಂಕಲ್ಪ ಮಾಡಬೇಕು, ಸ್ವಾತಂತ್ರ‍್ಯೋತ್ಸವದ ಶತಾಬ್ದಿಯನ್ನು ಭಾರತ ಮುಂಚೂಣಿ ರಾಷ್ಟçವಾಗಿ ನಿಲ್ಲಬೇಕು. ಈ ದೇಶವನ್ನು ಅಭಿವೃದ್ಧಿಪಡಿಸಲು ಅನೇಕ ಪ್ರಧಾನಿಗಳು ಒಂದಿಲ್ಲೊAದು ರೀತಿ ಶ್ರಮ ವಹಿಸಿದ್ದಾರೆ. ಪ್ರಧಾನಿ ಮೋದಿ ಬಂದ ನಂತರ ದೇಶದ ಸರ್ವ ಸ್ಪರ್ಶಿ ಅಭಿವೃದ್ಧಿ ಮಾಡಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಹೇಳುವಂತಿಲ್ಲ. ಸರ್ವ ಸಮುದಾಯಗಳ ಅಭಿವೃದ್ಧಿ ಮಾಡಿದ್ದಾರೆ. ೨೦೧೪ಕ್ಕೆ ಮುಂಚೆ ಪ್ರತಿ ದಿನ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಸುದ್ದಿ ಮುಖಪುಟದಲ್ಲಿ ರಾರಾಜಿಸುತ್ತಿತ್ತು. ಹಿಂದಿನ ಅವಧಿಯಲ್ಲಿ ಪ್ರಧಾನ ಮಂತ್ರಿಯನ್ನು ದೇಶದಲ್ಲಿ ಯಾರು ಪ್ರಧಾನಿ ಎಂದು ಪರಿಗಣಿಸಿರಲಿಲ್ಲ. ಎಲ್ಲ ಮಂತ್ರಿಗಳು ತಮ್ಮನ್ನು ತಾವೇ ಪ್ರಧಾನಮಂತ್ರಿ ಎಂದುಕೊAಡಿದ್ದರು. ಈಗ ಪ್ರಧಾನಿಯ ಬಗ್ಗೆ ವಿಶ್ವವೇ ಮಾತನಾಡುತ್ತಿದೆ. ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ಭಾರತದ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ ೨೫ ವರ್ಷಗಳಲ್ಲಿ ಭಾರತದ ಅಭಿವೃದ್ಧಿ ನಕ್ಷೆ ಸಿದ್ಧಪಡಿಸಿಕೊಂಡಿದ್ದೇವೆ. ೨೦೧೯ ರಲ್ಲಿ ಕೊರೊನಾ ಪರಿಣಾಮ ಲಾಕ್‌ಡೌನ್ ಮಾಡಲಾಯಿತು. ವಿಶ್ವದಲ್ಲಿ ಎಲ್ಲ ರಾಷ್ಟçಗಳು ಸಮಸ್ಯೆಗೆ ಸಿಲುಕಿದವು. ಪ್ರಧಾನಿ ಆರಂಭದಲ್ಲಿಯೇ ದೇಶದ ವಿಜ್ಞಾನಿಗಳನ್ನು ಕರೆದು ನಮ್ಮದೇ ಆದ ವ್ಯಾಕ್ಸಿನೇಶನ್ ಉತ್ಪಾದನೆಗೆ ಸೂಚಿಸಿದರು. ಕೋವಿಡ್ ನಂತರ ಆರ್ಥಿಕ ವ್ಯವಸ್ಥೆ ಸುಧಾರಣೆಯಾದ ವಿಶ್ವದ ಏಕೈಕ ದೇಶ ಭಾರತ. ಉದ್ಯಮಗಳಿಗೆ ಪ್ಯಾಕೇಜ್ ಘೋಷಣೆ ಮಾಡಲಾಯಿತು. ಬಡವರಿಗೆ ಉಚಿತ ಆಹಾರ ಒದಗಿಸಲಾಯಿತು. ನಾವು ಯಾವುದೇ ದೇಶವನ್ನು ನಿಂದಿಸುವುದಿಲ್ಲ. ಅದು ಭಾರತದ ಗುಣವಲ್ಲ. ವಿಶ್ವದ ಯಾವುದೇ ರಾಷ್ಟç ಮಾಡದ ಕೆಲಸವನ್ನು ಭಾರತ ಮಾಡಿದೆ. ಅದರ ಪರಿಣಾಮವಾಗಿ ಜನರು ಮುಕ್ತವಾಗಿ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತಾಯಿತು ಎಂದು ಹೇಳಿದರು.

ನೆರೆಹಾನಿ ತುರ್ತು ಪರಿಹಾರಕ್ಕೆ ರೂ. ೫೦೦ ಕೋಟಿ ಬಿಡುಗಡೆ

ಕಾರವಾರ, ಆ. ೪: ರಾಜ್ಯದಾದ್ಯಂತ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ ರೂ. ೫೦೦ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಭೂ ಕುಸಿತದಿಂದ ನಾಲ್ವರು ಮೃತಪಟ್ಟ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ೧೪ ಜಿಲ್ಲೆಗಳ ೧೧೫ ಹಳ್ಳಿಗಳಲ್ಲಿ ಭಾರೀ ಮಳೆಯಿಂದಾಗಿ ನೆರೆ ಹಾನಿ ಸಂಭವಿಸಿದೆ. ಬುಧವಾರ ಮತ್ತೆ ತುಮಕೂರಿನಲ್ಲಿ ನಾಲ್ಕು ಜನ ಹಾಗೂ ವಿಜಯನಗರದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ೬೦೦ ಮನೆಗಳು ಸಂಪೂರ್ಣ, ೨ ಸಾವಿರಕ್ಕೂ ಹೆಚ್ಚು ಮನೆಗಳು ತೀವ್ರತರ ಹಾಗೂ ೧೪ ಸಾವಿರಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ. ಎಲ್ಲದಕ್ಕೂ ಕೂಡ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಸೂಚಿಸಲಾಗಿದೆ. ೨೧,೪೩೧ ಹೆಕ್ಟೇರ್ ಪ್ರದೇಶ ಬೆಳೆ ನಾಶವಾಗಿದ್ದು, ಇದು ಇನ್ನೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಜಂಟಿ ಸಮೀಕ್ಷೆ ಮಾಡ ಬೇಕಾಗಿರುವುದರಿಂದ ವರದಿ ಬಂದ ತಕ್ಷಣ ಪರಿಹಾರ ವಿತರಿಸಲಾಗುವುದು ಎಂದರು. ಭಟ್ಕಳದಲ್ಲಿಯೂ ಭಾರೀ ಮಳೆಯಿಂದಾಗಿ ಮನೆಗಳಿಗೆ, ಅಂಗಡಿ ಗಳಿಗೆ ಹಾಗೂ ಬೋಟ್‌ಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಸುಮಾರು ರೂ. ೪೦ ಕೋಟಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಇದು ಇನ್ನೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಎಷ್ಟೇ ಹಾನಿಯಾದರೂ ಮನೆ, ಅಂಗಡಿ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಲು ಸಿದ್ಧವಿದೆ ಎಂದಿದ್ದಾರೆ. ಕಂದಾಯ ಸಚಿವ ಆರ್. ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಭಟ್ಕಳ ಶಾಸಕ ಸುನೀಲ್ ನಾಯ್ಕ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರೊಂದಿಗೆ ಆಗಮಿಸಿದ ಸಿಎಂ ಗ್ರಾಮದ ಪರಿಸ್ಥಿತಿ ಹಾಗೂ ಭೂಕುಸಿತಕ್ಕೆ ಕಾರಣಗಳ ಮಾಹಿತಿ ಪಡೆದರು.

ಸಿಜೆಐ ರಮಣ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ: ನ್ಯಾಯಮೂರ್ತಿ ಲಲಿತ್ ಹೆಸರು ಶಿಫಾರಸು!

ನವದೆಹಲಿ, ಆ. ೪: ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ತಮ್ಮ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದರು. ಸಿಜೆಐ ರಮಣ ಅವರು ತಮ್ಮ ಶಿಫಾರಸು ಪತ್ರದ ಪ್ರತಿಯನ್ನು ಖುದ್ದಾಗಿ ನ್ಯಾಯಮೂರ್ತಿ ಲಲಿತ್ ಅವರಿಗೆ ನೀಡಿದ್ದಾರೆ. ರಮಣ ಅವರ ನಂತರದ ಹಿರಿತನದಲ್ಲಿ ನ್ಯಾಯಮೂರ್ತಿ ಲಲಿತ್ ಅವರಿದ್ದಾರೆ. ೨೦೨೧ರ ಏಪ್ರಿಲ್ ೨೪ರಂದು ಎಸ್.ಎ. ಬೋಬ್ಡೆ ಅವರಿಂದ ಭಾರತೀಯ ನ್ಯಾಯಾಂಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಭಾರತದ ೪೮ನೇ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ರಮಣ ಅವರು ೧೬ ತಿಂಗಳ ಅವಧಿಯ ನಂತರ ಆಗಸ್ಟ್ ೨೬ ರಂದು ನಿವೃತ್ತರಾಗಲಿದ್ದಾರೆ. ನಂತರ ನ್ಯಾಯಮೂರ್ತಿ ಲಲಿತ್ ಅವರು ಭಾರತದ ೪೯ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅಧಿಕಾರಾವಧಿಯು ಚಿಕ್ಕದಾಗಿರಲಿದ್ದು ೨೦೨೨ರ ನವೆಂಬರ್ ೮ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಪ್ರಸ್ತುತ ಸುಪ್ರೀಂ ಕೋರ್ಟ್ನ ಎರಡನೇ ಹಿರಿಯ-ಅತ್ಯಂತ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಲಲಿತ್ ಅವರು ೧೯೮೩ರ ಜೂನ್‌ನಿಂದ ವಕೀಲಿಗಿರಿ ಆರಂಭಿಸಿದ್ದರು. ಡಿಸೆಂಬರ್ ೧೯೮೫ ರವರೆಗೆ ಬಾಂಬೆ ಹೈಕೋರ್ಟ್ನಲ್ಲಿ ಅಭ್ಯಾಸ ಮಾಡಿದ್ದರು. ನಂತರ ೧೯೮೬ರ ಜನವರಿಯಿಂದ ದೆಹಲಿಯಲ್ಲಿ ಅಭ್ಯಾಸ ಆರಂಭಿಸಿದ್ದರು. ಏಪ್ರಿಲ್ ೨೦೦೪ರಲ್ಲಿ ಸುಪ್ರೀಂ ಕೋರ್ಟ್ನಿಂದ ಹಿರಿಯ ವಕೀಲರಾಗಿ ನಾಮನಿರ್ದೇಶನಗೊಂಡಿದ್ದ ಅವರು ಹಲವಾರು ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿ ಕಾಣಿಸಿಕೊಂಡರು.