ಕಾಶ್ಮೀರ ಎಂದೊಡನೆ ಭಯೋತ್ಪಾದನೆ, ಹಿಂಸಾಚಾರ, ಭಯ, ಅಭದ್ರತೆ ಎಂಬ ಪದಗಳೇ ಮನಸ್ಸಿನಲ್ಲಿ ಹುಟ್ಟುವುದು ಸಹಜ. ಇವುಗಳೆಲ್ಲದರ ಮಧ್ಯೆ ‘ಹಿಮಾಲಯ’ಎಂಬ ವಿಶ್ವ ಖ್ಯಾತಿಯ ಪರ್ವತ ಸಾಲೇ ಮರೆಯಾಗಿದೆ ಎಂದರೆ ಕೆಟ್ಟದ್ದನ್ನೇ ಬಿಂಬಿಸುವ ಕೆಲ ಆಧುನಿಕ ಮಾಧ್ಯಮಗಳೇ ಕಾರಣ ಎನ್ನಬಹುದು. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಹಸ್ರಾರು ಅಡಿಯ ಪರ್ವತಗಳು, ಖಾಲಿ ಹಾಳೆಯ ಮೇಲೆ ನೀಲಿ ಬಣ್ಣ ಚೆಲ್ಲಿರುವಂತಿರುವ ನೂರಾರು ಕೆರೆಗಳು, ಬೆಟ್ಟದ ತುದಿಯಿಂದ ವೀಕ್ಷಿಸಿದರೂ ಸ್ಪಷ್ಟವಾಗಿ ಗೋಚರಿಸುವ ನದಿಗಳ ನೀರಿನ ಕೆಳಭಾಗದಲ್ಲಿನ ಕಲ್ಲುಗಳು, ಇವುಗಳೆಲ್ಲವು ನೈಜವಾದ ಕಾಶ್ಮೀರವನ್ನು ಬಿಂಬಿಸುತ್ತವೆ. ಆದರೆ ಇಂತಹ ಪ್ರಕೃತಿ ರಮಣೀಯ ವಿಚಾರಗಳು ಮಾಧ್ಯಮಗಳಲ್ಲಿ ಪ್ರಚಾರವಾಗದೆ ಕೇವಲ ನಕಾರಾತ್ಮಕತೆ ಮಾತ್ರ ಬಿಂಬಿತಗೊಳ್ಳುವುದು ವಿಷಾದನೀಯ.

ಇಂತಹ ಸುಂದರ ಪರಿಸರವು ವಿದೇಶದವರ ಕೈಗೆ ಬೀಳದಂತೆ ಭದ್ರವಾಗಿರಿಸುವಲ್ಲಿ ನಮ್ಮ ದೇಶದ ರಕ್ಷಣಾ ಪಡೆಗಳ ಪಾತ್ರ ಮಹತ್ವದ್ದು. ಹಿಮಾಲಯ ಪರ್ವತ ಶ್ರೇಣಿಯು ಸಮುದ್ರ ಮಟ್ಟದಿಂದ ಅತ್ಯಂತ ಎತ್ತರ ಇರುವ ಕಾರಣ ಇಲ್ಲಿ ಬೆಳಿಗ್ಗೆ ಸೂರ್ಯನ ಬೆಳಕು ಹಾಗೂ ಉಷ್ಣಾಂಶ, ಭೂಮಿಯ ವಾತಾವರಣದ ಕೆಲವೇ ಕೆಲವು ಪದರಗಳನ್ನು ದಾಟಿದ ಬಳಿಕ ಭೂಮಿಯ ಮೇಲ್ಮೆöÊ ತಲುಪುವುದರಿಂದ ಬೆಳಿಗ್ಗೆ ತಾಪಮಾನ ಹೆಚ್ಚಿಲ್ಲದಿದ್ದರೂ ಉಷ್ಣಾಂಶದ ತೀವ್ರತೆ ದೇಹದ ಚರ್ಮಕ್ಕೆ ಹಾನಿಕರ. ಇದೇ ಸೂರ್ಯನ ಉಷ್ಣಾಂಶವನ್ನು ಹೀರಿಕೊಳ್ಳಲು ಪದಾರ್ಥಗಳ (ಮರ-ಗಿಡಗಳ) ಅಭಾವವಿರುವ ಕಾರಣ ರಾತ್ರಿ ಅತ್ಯಂತ ಛಳಿಯ ವಾತಾವರಣವನ್ನು ಪ್ರತಿನಿತ್ಯ ಎದುರಿಸಿ ದೇಶ ರಕ್ಷಣೆ ಮಾಡುವ ಸೈನಿಕರ ಸೇವೆ ಶ್ಲಾಘನೀಯ. ಇಂತಹ ದೇಶಸೇವಕರ ದೈನಂದಿನ ಜೀವನದ ಅನುಭವವನ್ನು ಸುಮಾರು ೭ ದಿನಗಳ ಕಾಲ ಸಾಮಾನ್ಯರಿಗೆ ನೀಡಬಲ್ಲ ಹಲವು ಚಾರಣ ಗುಂಪುಗಳಲ್ಲಿ ಒಂದಾದ, ಕೊಡಗಿನವರೇ ಆದ ಮೇಘನಾ ಕುಶಾಲಪ್ಪ ಹಾಗೂ ಉತ್ತರಾಖಂಡದ ಹೃಷಿಕೇಶದ ಗೌತಮ್-ಇವರಿಬ್ಬರು ಕಟ್ಟಿ ಬೆಳಿಸಿರುವ ‘ಟ್ರೆಕ್ ಆ್ಯಂಡ್ ಟೇಲ್ಸ್’ ಸಂಸ್ಥೆಗೂ ಒಂದು ನಮಸ್ಕಾರ.

ಕಾಶ್ಮೀರದ ಶ್ರೇಷ್ಠ ಸರೋವರಗಳನ್ನು ನೋಡಲು ‘ಟ್ರೆಕ್ ಆ್ಯಂಡ್ ಟೇಲ್ಸ್’ ಮೂಲಕ ನಾನು, ಅಕ್ಕ ಪ್ರಜ್ಞ ಕೊಡಗಿನ ಇನ್ನಿತರ ೩ ಮಂದಿ ಸಾವನ್, ಸುಬ್ಬಯ್ಯ ಹಾಗೂ ಧನುಶ್ ಸೇರಿದಂತೆ ಉತ್ತರ ಭಾರತದ ೪ ಮಂದಿ ಸೇರಿ ಒಟ್ಟು ೯ ಚಾರಣಿಗರು ಜುಲೈ ೨ ರಂದು ಪಯಣ ಬೆಳೆಸಿದೆವು. ಒಟ್ಟು ೭ ದಿನಗಳ ಚಾರಣದಲ್ಲಿ ೮೨ ಕಿ.ಮೀ ಪಯಣಿಸಿ ೬ ರಾತ್ರಿಗಳ ಕಾಲ ಟೆಂಟ್‌ನಲ್ಲಿ ವಿವಿಧೆಡೆಗಳಲ್ಲಿ ವಾಸಿಸುವ ಸಾಹಸ ಶ್ರೀನಗರದಿಂದ ಸುಮಾರು ೮೧ ಕಿ.ಮೀ. ದೂರದಲ್ಲಿರುವ ಶಿಟ್ಕಡಿ ಎಂಬ ಸ್ಥಳದಿಂದ ಪ್ರಾರಂಭಗೊAಡಿತು.

ಅವಿರತ ಕಾವಲು !

ಈ ಚಾರಣಕ್ಕೂ ಮುನ್ನ ಕೇಂದ್ರಾಡಳಿತ ಪ್ರದೇಶವಾಗಿರುವ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲೇ ನಮ್ಮ ಪಯಣದಲ್ಲಿನ ವಿಭಿನ್ನ ಅನುಭವ ಶುರುವಾಯಿತು. ಶ್ರೀನಗರ ವಿಮಾನ ನಿಲ್ದಾಣವು ಬೆಂಗಳೂರು, ದೆಹಲಿ ನಿಲ್ದಾಣಗಳಂತೆ ಅತ್ಯಾಧುನಿಕ ಸೌಲಭ್ಯವುಳ್ಳ ನಿಲ್ದಾಣವಲ್ಲದಿದ್ದರೂ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸುರಕ್ಷಾ ನಿಲ್ದಾಣವೆಂದೇ ಹೇಳಬಹುದು. ನಿಲ್ದಾಣದ ಪ್ರವೇಶಕ್ಕೂ ಮುನ್ನ ನೂರಾರು ಸಂಖ್ಯೆಯಲ್ಲಿ ರಕ್ಷಣಾ ಪಡೆಯ ಸೈನಿಕರು, ಬಿ.ಎಸ್.ಎಫ್, ಸಿ.ಆರ್.ಪಿ.ಎಫ್ ಜವಾನರು ದಿನದ ೨೪ ಗಂಟೆಗಳ ಕಾಲ ಕಾವಲಿರುತ್ತಾರೆ. ಶ್ರೀನಗರದಿಂದ ಇತರೆಡೆಗಳಲ್ಲಿ ಪಯಣ ಬೆಳಿಸಿದ್ದಲ್ಲಿ ವಿಮಾನ ಪ್ರಯಾಣಿಕರ ಬ್ಯಾಗ್ ಗಳ ಚೆಕ್ಕಿಂಗ್ ವಿಮಾನ ನಿಲ್ದಾಣ ಪ್ರವೇಶಕ್ಕೂ ಮುನ್ನವೇ ನಡೆಯುತ್ತದೆ.

ನಿಲ್ದಾಣದಿಂದ ಶ್ರೀನಗರ ಮುಖ್ಯ ರಸ್ತೆಗಳಲ್ಲಿ ಸಾಗುತ್ತಿದ್ದೊಡನೆ ರಸ್ತೆಯ ಬದಿಯಲ್ಲಿ ಗರಿಷ್ಠ ೫೦ ಮೀಟರ್ ಗಳಿಗೊಬ್ಬರು ಸೈನಿಕರು ಬಹುತೇಕ ‘ಅಸಾಲ್ಟ್ ರೈಫಲ್’ಗಳನ್ನು ಹೊಂದಿರುತ್ತಾರೆ. ಸುಡು ಬಿಸಿಲಿನಲ್ಲಿಯೂ ಅಲ್ಲೆ ನಿಂತು ಕೊಂಡಿರುತ್ತಾರೆ. ಹಲವಾರು ಬುಲೆಟ್‌ಪ್ರೂಫ್ ಆರ್ಮಿ ಟ್ರಕ್ ಗಳು ಸೇರಿದಂತೆ ಇನ್ನಿತರ ಬುಲೆಟ್‌ಪ್ರೂಫ್ ವಾಹನಗಳ ನ್ನೊಳಗೊಂಡ ‘ಆರ್ಮಿ ಕಾನ್ವಾಯ್’ ಶ್ರೀನಗರದ ಮುಖ್ಯ ರಸ್ತೆಗಳಲ್ಲಿ ಏಕರೂಪದಲ್ಲಿ ಶಿಸ್ತಿನಿಂದ ಚಲಿಸುತ್ತಿರುತ್ತವೆ. ಈ ಕಾನ್ವಾಯ್‌ನ ಸುಗಮ ಸಂಚಾರಕ್ಕೆ ಸಾರ್ವಜನಿಕರು ದಾರಿ ಬಿಡಲೇಬೇಕು. ವಿಮಾನ ನಿಲ್ದಾಣದಿಂದ ಸೋನ್‌ಮಾರ್ಗ್ನಲ್ಲಿನ ನಮ್ಮ ಬೇಸ್ ಕ್ಯಾಂಪ್‌ಗೆ ಕೊಂಡೊಯ್ದ ಟ್ಯಾಕ್ಸಿ ಚಾಲಕನ ಪ್ರಕಾರ ಪುಲ್ವಾಮದಲ್ಲಿ ನಮ್ಮ ದೇಶದ ಸೈನಿಕರ ಮೇಲಿನ ಭೀಕರ ದಾಳಿಯಾದಾಗಿನಿಂದ ಭದ್ರತೆಯ ದೃಷ್ಟಿಯಿಂದ ಈ ಆರ್ಮಿ ಕಾನ್ವಾಯ್ ಪ್ರತಿನಿತ್ಯ ಸಕ್ರಿಯವಾಗಿದೆೆ. ಇನ್ನು ನಾವು ಚಾರಣಕ್ಕೆ ತೆರಳಿದ ಸಂದರ್ಭ ಅಮರನಾಥ ಯಾತ್ರೆ ಕೂಡ ನಡೆಯುತ್ತಿದ್ದ ಕಾರಣ ಲಕ್ಷಾಂತರ ಯಾತ್ರಿಕರು ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದರು. ಇವರುಗಳ ಭದ್ರತೆಯ ದೃಷ್ಟಿಯಿಂದ ಸೇನಾಬಲವನ್ನು ದ್ವಿಗುಣಗೊಳಿಸಲಾಗಿತ್ತು.

ಒಂದು ಸಂದರ್ಭದಲ್ಲಿ ಒಂದೇ ಸಾಲಿನಲ್ಲಿ ಯಾತ್ರಿಕರಿದ್ದ ಸುಮಾರು ೫೦ ಬಸ್‌ಗಳು ರಸ್ತೆಯಲ್ಲಿ ಚಲಿಸುತ್ತಿದ್ದವು. ನಮ್ಮ ವಾಹನ ಸೇರಿದಂತೆ ಇತರ ಎಲ್ಲಾ ವಾಹನಗಳನ್ನು ತಡೆಹಿಡಿಯಲಾಯಿತು. ಈ ೫೦ ಬಸ್‌ಗಳ ಮುಂಭಾಗದಲ್ಲಿ ಸುಮಾರು ೪ ರಿಂದ ೫ ಬುಲೆಟ್‌ಪ್ರೂಫ್ ಸೇನಾ ವಾಹನಗಳು, ಅವುಗಳಲ್ಲಿಯೇ ಇರುವ ಮಶಿನ್ ಗನ್‌ಗಳನ್ನು ಅವಶ್ಯವಿದ್ದರೆ ಬಳಸಲು ಸಿದ್ಧವಿದ್ಧ ಪ್ರತಿ ಗನ್‌ಗೆ ಎರಡರಂತೆ ಸೈನಿಕರು, ಬಸ್‌ಗಳ ಮಧ್ಯೆ ಸುಮಾರು ೨ ರಿಂದ ೩ ಸೇನಾ ವಾಹನಗಳು-ಇದರಲ್ಲಿ ಒಂದು ಸಿಗ್ನಲ್ ಜ್ಯಾಮರ್ ಹೊಂದಿ ರುವ ಒಂದು ವಾಹನ ಹಾಗೂ ಹಿಂಬದಿಯಲ್ಲಿ ಮತ್ತೆ ೪ ರಿಂದ ೫ ಬುಲೆಟ್‌ಪ್ರೂಫ್ ವಾಹನಗಳು ಈ ಪವಿತ್ರ ಯಾತ್ರೆ ಮಾಡುವ ಭಕ್ತಾದಿಗಳಿಗೆ ರಾಜಕಾರಣಿ, ವಿ.ಐ.ಪಿ ಗಳಿಗಿಂತ ಹೆಚ್ಚಿನ ಭದ್ರತೆ ನೀಡುತ್ತಿದ್ದ ದೃಶ್ಯ ಗಮನಾರ್ಹ. (ಭದ್ರತೆಯ ದೃಷ್ಟಿಯಿಂದ ಇವುಗಳ ಫೋಟೋ ಸೆರೆಹಿಡಿಯಲು ಸಾಧ್ಯವಾಗಿಲ್ಲ).

ಹಿಮಾವೃತ ಪರ್ವತಗಳು

ಅಮರನಾಥ ಯಾತ್ರಿಗಳ ವಾಹನ ದಟ್ಟನೆಯ ನಡುವೆಯೇ ಟವೇರಾ ವಾಹನದಲ್ಲಿ ಚಾಲಕ ಫಾರೂಕ್ ವೇಗವಾಗಿ ಹಾಗೂ ಸುರಕ್ಷಿತವಾಗಿ ಶ್ರೀನಗರದಿಂದ ಸುಮಾರು ೮೦ ಕಿ.ಮೀ ದೂರದಲ್ಲಿದ್ದ ನಮ್ಮ ಬೇಸ್ ಕ್ಯಾಂಪ್ ಶಿಟ್ಕಡಿಗೆ ತಲುಪಿಸಿದರು. ಈ ಶಿಟ್ಕಡಿ ಕ್ಯಾಂಪ್ ಅಮರನಾಥಕ್ಕೆ ಸಾಗುವ ರಸ್ತೆಯ ಬದಿಯಲ್ಲಿಯೇ ಇದ್ದ ಕಾರಣ ರಾತ್ರಿಯವರೆಗೂ ಯಾತ್ರಾರ್ಥಿಗಳ ಸಂಚಾರ, ವಾಹನ ದಟ್ಟನೆ ಮುಂದುವರಿಯಿತು. ಸೇನಾ ಸಿಬ್ಬಂದಿ ರಾತ್ರಿಯವರೆಗೂ ಅಲ್ಲೇ ಇದ್ದು ವಾಹನ ಸಂಚಾರ ನಿರ್ವಹಣೆ ಮಾಡುತ್ತಿದ್ದರು. ಈ ಸ್ಥಳದಲ್ಲಿ ನಮ್ಮ ತಂಡದೊAದಿಗೆ ಇತರ ಟ್ರೆಕ್ಕಿಂಗ್ ಸಂಸ್ಥೆಗಳ ತಂಡವೂ ಮೊಕ್ಕಾಂ ಹೂಡಿದ್ದವು. ಚಾರಣ ಪ್ರಾರಂಭವಾಗುವ ಮುನ್ನವೇ ಕ್ಯಾಂಪ್‌ನ ಸುತ್ತಲ ಪ್ರಕೃತಿ ರಮಣೀಯ ನೋಟವು ನಮ್ಮ ಹುಬ್ಬೇರಿಸಿತು. ಪಕ್ಕದಲ್ಲೇ ಇದ್ದ ಹೆದ್ದಾರಿಯಲ್ಲಿ ವಾಹನ ದಟ್ಟನೆಯು ಕಿರಿಕಿರಿ ಉಂಟುಮಾಡಿತ್ತಾದರೂ ದೂರದಲ್ಲಿನ ಹಿಮಾವೃತ ಪರ್ವತಗಳು, ಸಮೀಪದಲ್ಲಿಯೇ ನೆಲೆಸಿದ್ದ ಹಸಿರು ಸಮೃದ್ಧ ಬೆಟ್ಟ-ಗುಡ್ಡಗಳು ಹಾಗೂ ಮಂಜುಗಡ್ಡೆ ಕರಗುವಿಕೆಯಿಂದ ಉತ್ಪತ್ತಿಯಾಗುವ ನೀರಿನಿಂದ ಸೃಷ್ಟಿಯಾದ ನದಿಯ ನೀರಿನ ಚಲನದ ಸದ್ದಿನ ಮಧ್ಯೆ ಆ ವಾಹನ ದಟ್ಟನೆಯ ಕಿರಿಕಿರಿಯೇ ಮಾಯವಾಯಿತು.

‘ಟ್ರೆಕ್ ಆ್ಯಂಡ್ ಟೈಲ್ಸ್’ ಸಂಸ್ಥೆ ಚಾರಣದ ನಿರ್ವಹಣೆ ಮಾಡಿದರೆ, ಕಾಶ್ಮೀರದಲ್ಲಿನ ಸ್ಥಳೀಯ ಸಂಸ್ಥೆ ‘ಹಿಪ್ನೊಟೈಸಿಂಗ್ ಹಿಮಾಲಯಾಸ್’ ಅಲ್ಲಿ ನಮಗೆ ಟೆಂಟ್, ಸ್ಲೀಪಿಂಗ್ ಬ್ಯಾಗ್‌ಗಳ ವ್ಯವಸ್ಥೆ ಇತ್ಯಾದಿಗಳನ್ನು ಕಲ್ಪಿಸಿತ್ತು. ಇದರೊಂದಿಗೆ ಚಾರಣದಲ್ಲಿ ಅತ್ಯಂತ ಪ್ರಮುಖವಾಗಿರುವ ಆಹಾರ ತಯಾರಿಕೆ ಸೇರಿದಂತೆ ಚಾರಣದ ಗೈಡ್ ಕೂಡ ಅವರೇ ನಿರ್ವಹಿಸಿದ್ದರು.

ಶಿಟ್ಕಡಿ ಕ್ಯಾಂಪ್ ಸಮುದ್ರ ಮಟ್ಟದಿಂದÀ ೭,೭೮೦ ಅಡಿ ಎತ್ತರದಲ್ಲಿದ್ದು, ಅಲ್ಲಿಂದ ೧೧,೮೩೮ ಅಡಿ ಎತ್ತರದ ನಿಚ್‌ನಾಯ್ ಎಂಬ ಸ್ಥಳಕ್ಕೆ ನಾವು ಚಾರಣದ ಮೊದಲನೆಯ ದಿನ ಸಾಗಬೇಕಿತ್ತು. ಒಟ್ಟು ಮೊದಲನೆಯ ದಿನ ೧೨ ಕಿ.ಮೀ ಚಾರಣ. ಕೇವಲ ೧೨ ಕಿ.ಮೀ ಆದರೂ ಒಟ್ಟು ಸುಮಾರು ೪,೦೦೦ ಅಡಿ ಎತ್ತರ ಏರಬೇಕಾಗಿದ್ದ ಕಾರಣ ಅಂದಿನ ಚಾರಣ ಪೂರ್ಣ ಗೊಳಿಸಲು ಸುಮಾರು ೬ ರಿಂದ ೭ ಗಂಟೆಗಳ ಕಾಲಾವಕಾಶ ಅಗತ್ಯವಿತ್ತು. ಬೆಳಗ್ಗಿನ ಉಪಹಾರದ ಬಳಿಕ ಮತ್ತೆ ಚಾರಣಿಸಲು ಆರಂಭಿಸಿದೆವು.

ನೀವು ಪಾಕಿಸ್ತಾನದವರೊಂದಿಗೆ ಸಂಪರ್ಕದಲ್ಲಿದ್ದೀರ ?

ಚಾರಣದುದ್ದಕ್ಕೂ ಹಲವಾರು ಸೇನಾ ಕ್ಯಾಂಪ್‌ಗಳನ್ನು ದಾಟಬೇಕಿತ್ತು. ಈ ಸಂದರ್ಭ ಅಲ್ಲಿ ನಿಯೋಜಿಸ್ಪಟ್ಟಿದ್ದ ಯೋಧರು ಚಾರಣಿಗರ ಪರಿಶೀಲನೆ ನಡೆಸುತ್ತಾರೆ. ಮೊದಲನೆಯ ದಿನದ ಚಾರಣದಲ್ಲಿ ನಾರಾನಾಗ್ ಎಂಬ ಸೇನಾ ಚೆಕ್‌ಪೋಸ್ಟ್ ದಾಟಿ ಸಾಗಬೇಕಾಯಿತು. ಇಲ್ಲಿ ಚಾರಣಿಗರನ್ನು ತಪಾಸಣೆ ಮಾಡಲಾಗುತ್ತದೆ. ಚಾರಣಿಗರ ಗುರುತಿನ ಚೀಟಿ ಹಾಗೂ ಬ್ಯಾಗ್‌ಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಇದರೊಂದಿಗೆ ಮೊಬೈಲ್ ಫೋನನ್ನೂ ಸಹ ತಪಾಸಣೆ ಮಾಡಲಾಗುತ್ತದೆ. ವಾಟ್ಸಾö್ಯಪ್‌ನಲ್ಲಿ ಪಾಕಿಸ್ತಾನದವರೊಂದಿಗೆ ಸಂಪರ್ಕ ಹೊಂದಿದ್ದೇವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಾರೆ. ಅಚ್ಚರಿ ಎಂಬAತೆ ನಮ್ಮ ಚಾರಣ ಗುಂಪಿನ ಹಲವಾರು ಮಂದಿಯ ವಾಟ್ಸಾö್ಯಪ್ ಚಾಟ್‌ನಲ್ಲಿ +೯೨ ನಿಂದ ಪ್ರಾರಂಭಗೊAಡ ಸಂಖ್ಯೆಯಿAದ ಸಂದೇಶಗಳು ಬಂದಿದ್ದವು. ಭಾರತ ಸರಕಾರದ ಕೆಲವು ಯೋಜನೆಗಳ ವಿವರವುಳ್ಳ ಚಿತ್ರ ಸಂದೇಶ ಪಾಕಿಸ್ತಾನದ +೯೨ ಪ್ರಾರಂಭಿತ ಸಂಖ್ಯೆಯಿAದ ಹಲವರಿಗೆ ಸಂದೇಶ ರವಾನೆಯಾಗಿತ್ತು. ಅನಾಮಧೇಯ ವ್ಯಕ್ತಿಯಿಂದ ಸಂದೇಶ ಬಂದಿದೆ ಎಂದು ಈ ಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಸಂದೇಶ ಪಡೆದಿದ್ದವರು ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರಾದರೂ ‘ವಾಟ್ಸಾö್ಯಪ್ ಚಾಟ್’ ಅಳಿಸಿರಲಿಲ್ಲ. +೯೨ ಪಾಕಿಸ್ತಾನಿ ಸಂಖ್ಯೆ ಎಂದು ಊಹೆ ಕೂಡ ಮಾಡಿರಲಿಲ್ಲ. ತಕ್ಷಣವೇ ಈ ಚ್ಯಾಟ್‌ಗಳನ್ನು ಅಲ್ಲಿ ತಪಾಸಣೆ ನಡೆಸುತ್ತಿದ್ದ ಯೋಧ ಅಳಿಸಲು ತಿಳಿಸಿದರು. ಎಲ್ಲರ ಗುರುತಿನ ಚೀಟಿ ತಪಾಸಣೆ ಬಳಿಕ ಭದ್ರತಾ ದೃಷ್ಟಿಯಿಂದ ಛಾಯಾಚಿತ್ರ ಕ್ಲಿಕ್ಕಿಸಿದ ಯೋಧರು, ನೀವು ಇಲ್ಲಿ ಸುರಕ್ಷಿತವಾಗಿರುತ್ತೀರ. ನಿಮ್ಮ ರಕ್ಷಣೆಗಾಗಿಯೇ ನಾವಿರುವುದು ಎಂಬ ವಿಶ್ವಾಸನೀಯ ಮಾತುಗಳನ್ನಾಡಿ ಚಾರಣ ಮುಂದುವರಿಸುವAತೆ ಸೂಚಿಸಿದರು. (ಮುಂದುವರಿಯುವುದು)

-ಪ್ರಜ್ವಲ್ ಜಿ. ಆರ್.