ಪೆರಾಜೆ, ಆ. ೪: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಗೆ ನೆರೆ ಸೃಷ್ಟಿಯಾಗಿದ್ದು, ಬುಧವಾರ ರಾತ್ರಿ ಪಯಸ್ವಿನಿ ನದಿ ಮತ್ತೆ ಉಕ್ಕಿ ಹರಿದಿದೆ. ಮಂಗಳವಾರ ರಾತ್ರಿ ಜಲಪ್ರಳಯಕ್ಕೆ ಒಳಗಾದ ಪ್ರದೇಶಗಳಲ್ಲಿ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಲ್ಲುಗುಂಡಿ, ಪೆರಾಜೆಯ ದಾಸರ ಹಿತ್ತಲು, ಸಮೀಪದ ಪಾಲಡ್ಕದಲ್ಲಿ ಪಯಸ್ವಿನಿ ಉಕ್ಕಿ ಹರಿದು ಮಡಿಕೇರಿ-ಸುಳ್ಯ ಮಧ್ಯೆ ಹೆದ್ದಾರಿ ಮತ್ತೊಮ್ಮೆ ಮುಳುಗಡೆಯಾಗಿದೆ. ಕೆಲವು ಗಂಟೆಗಳ ಕಾಲ ವಾಹನಗಳನ್ನು ನಿಲ್ಲಿಸಿ ನೀರಿನ ಮಟ್ಟ ಕಡಿಮೆ ಆದ ನಂತರ ಸಂಚಾರಕ್ಕೆ ಅವಕಾಶ ನೀಡಲಾಯಿತು.

ಕೊಚ್ಚಿ ಹೋದ ಸೇತುವೆ

ಸಂಪಾಜೆಯಿAದ ಊರುಬೈಲು ಮೂಲಕ ಚೆಂಬು ಗ್ರಾಮಕ್ಕೆ ಹೋಗುವ ಗ್ರಾಮ ಸಡಕ್ ರಸ್ತೆಯಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಿರುವ ನೂತನ ಸೇತುವೆ ಉದ್ಘಾಟನೆಗೆ ಮೊದಲೇ ನಿನ್ನೆ ಉಕ್ಕಿ ಹರಿದ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ೨೦೧೮ ರ ಪ್ರಾಕೃತಿಕ ದುರಂತ ಸಂದರ್ಭದಲ್ಲಿ ಇದೇ ಜಾಗದಲ್ಲಿ ಹಳೆಯ ಸೇತುವೆ ಕೊಚ್ಚಿ ಹೋದ ಪರಿಣಾಮ ಇಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆಯ ಎರಡೂ ಭಾಗಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದಲ್ಲದೆ, ಇಡೀ ಸೇತುವೆಯೇ ಒಂದು ಅಡಿಯಷ್ಟು ಭೂಮಿಯ ಒಳಗೆ ಹೂತುಹೋಗಿದೆ.

ನಿನ್ನೆಯಷ್ಟೇ ಇದೇ ರಸ್ತೆಯ ಇನ್ನೊಂದು ಭಾಗದಲ್ಲಿ ಮೋರಿಯೊಂದು ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದ್ದು,

(ಮೊದಲ ಪುಟದಿಂದ) ಈಗ ಊರುಬೈಲು ಭಾಗದ ಸುಮಾರು ೪೫ ಮನೆಗಳಿರುವ ಪ್ರದೇಶದ ಜನರು ಎರಡೂ ಕಡೆಯೂ ಹೊರಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ದಿಕ್ಕೇ ತೋಚದಂತಾಗಿದೆ.

ಈ ಭಾಗದ ಜನರ ಸಮಸ್ಯೆ ಪರಿಹರಿಸುವಲ್ಲಿ ಜಿಲ್ಲಾಡಳಿತ ತುರ್ತಾಗಿ ಸ್ಪಂದಿಸಲು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಸAಪಾಜೆಯ ಹೊದ್ದೆಟ್ಟಿ ಬೈಲು ಭಾಗದಲ್ಲಿ ಪಾಲೆಪ್ಪಾಡಿ ಶಿವರಾಮ ಅವರ ಮನೆಯ ಪಕ್ಕದ ತೋಡಿನಲ್ಲಿ ಭೀಕರ ಮಳೆಗೆ ನೀರಿನ ಹರಿವು ಹೆಚ್ಚಾಗಿ ಮನೆಯ ಅಂಗಳದಲ್ಲಿ ನೀರು ಹರಿಯುತ್ತಿದೆ. ಇತರ ಮನೆಗಳಲ್ಲಿಯೂ ನೀರಿನ ಹರಿವಿನಿಂದ ಸಮಸ್ಯೆಯಾಗಿದ್ದು, ಅಂಗಳದಲ್ಲಿ ಇದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಷ್ಟ ಉಂಟಾಗಿದೆ.

ಸುರಿಯುತ್ತಿರುವ ಮಳೆಗೆ ಕೊಯನಾಡು ಬಳಿಯ ಕಲ್ಲಾಳ ರಸ್ತೆೆ ಕೊಚ್ಚಿಹೋಗಿದೆ.

ನೀರಿನ ರಭಸಕ್ಕೆ ಸಂಪಾಜೆಯ ಕೂಟೇಲು ಭಾಗಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಹಿಂದಿನ ದಿನ ನಿರ್ಮಾಣ ಮಾಡಿದ ಪಾಲ ಕೂಡ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಆ ಭಾಗದ ಜನರಿಗೆ ದಿನನಿತ್ಯದ ಪ್ರಯಾಣ ಕಷ್ಟಸಾಧ್ಯವಾಗಿದೆ.

-ವರದಿ : ಕಿರಣ್ ಕುಂಬಳಚೇರಿ