ಮಡಿಕೇರಿ, ಆ. ೪: ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ, ಶಾಲಾ ಮಕ್ಕಳಲ್ಲಿ ಆರೋಗ್ಯ ಮತ್ತು ಕೈತೊಳೆಯುವ ಬಗ್ಗೆಯೂ ಅರಿವು ಮೂಡಿಸಬೇಕು. ಆರೋಗ್ಯ ಇಲಾಖೆ ವಿತರಿಸುವ ಜಿಂಕ್ ಮತ್ತು ಒಆರ್‌ಎಸ್ ದ್ರಾವಣಗಳ ಬಗ್ಗೆ ಗ್ರಾಮೀಣರಿಗೂ ಮಾಹಿತಿ ಲಭ್ಯವಾಗಬೇಕು. ಯಾವುದೇ ಮಗು ಅತಿಸಾರ ಭೇದಿಯಿಂದ ಬಳಲದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಹಾಗೂ ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಮಕ್ಕಳ ಕೈ ತೊಳೆಯುವ ರೀತಿಯನ್ನು ಹೇಳಿಕೊಡುವುದು, ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಮಕ್ಕಳ ಪೋಷಕರಲ್ಲಿ ಅತಿಸಾರ ಭೇದಿಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಂದ ೧ ನಿಮಿಷದ ಜಾಗೃತಿ ವೀಡಿಯೋ ಮಾಡಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಕಾರ್ಯಕ್ರಮಗಳ ಆಯೋಜನೆಯ ಉದ್ದೇಶ ಹಾಗೂ ಸಾರ್ಥಕತೆಗೆ ಮಾಹಿತಿ ತಲುಪಿಸುವ ಜೊತೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ಗ್ರಾಮ, ನಗರ, ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೀರಿನ ಗುಣಮಟ್ಟ ಪರೀಕ್ಷೆಗೆ ಪ್ರಯೋಗ ಶಾಲೆಗೆ ಕಳುಹಿಸಬೇಕು. ಈ ಸಂಬAಧ ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ೨ ಪ್ರಯೋಗ ಶಾಲೆಗಳಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ರಾಷ್ಟಿçÃಯ ಜಂತುಹುಳು ನಿಯಂತ್ರಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ತಾ. ೧೦ ರಂದು ಆಚರಿಸುತ್ತಿದ್ದು, ೧ ರಿಂದ ೧೯ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣೆಯ ಅಲ್ಬಂಡ್‌ಜೋಲ್ ಮಾತ್ರೆ ವಿತರಿಸಬೇಕು. ಯಾವುದೇ ಮಕ್ಕಳು ಇದರಿಂದ ಹೊರಗುಳಿಯಬಾರದು. ಪ್ರತಿಯೊಬ್ಬರಿಗೂ ಮಾತ್ರೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಓ ಭಂವರ ಸಿಂಗ್ ಮೀನಾ ಮಾತನಾಡಿ, ಅತಿಸಾರ ಭೇದಿಯ ನಿಯಂತ್ರಣ ಪ್ರಯೋಜನವನ್ನು ಪ್ರತಿ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳಿಂದ ಪ್ರತಿ ಹಂತದಲ್ಲಿ ಮಾಹಿತಿಗಳನ್ನು ಪಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರಪೇಟೆ ಮತ್ತು ವೀರಾಜಪೇಟೆಯಲ್ಲಿ ನೀರು ಪರೀಕ್ಷೆ ಪ್ರಯೋಗಶಾಲೆ ಇದ್ದು, ಇಲ್ಲಿ ಬೋರ್‌ವೆಲ್, ಶಾಲೆಗೆ ಪೂರೈಕೆಯಾಗುವ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗ ಶಾಲೆಯಲ್ಲಿ ಪರೀಕ್ಷಿಸಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ ಮಾತನಾಡಿ, ಬೇಸಿಗೆಕಾಲ ಮತ್ತು ಮಳೆಗಾಲದಲ್ಲಿ ಚಿಕ್ಕ ಮಕ್ಕಳಲ್ಲಿ ನೀರು ಹಾಗೂ ಸ್ವಚ್ಛತೆಯ ಕೊರತೆಯಿಂದ ತೀವ್ರವಾಗಿ ವಾಂತಿ-ಭೇದಿ ಕಂಡುಬರುತ್ತದೆ. ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸಾಂಕ್ರಾಮಿಕ ರೋಗಗಳನ್ನು ಸಂಪೂರ್ಣ ತಡೆಗಟ್ಟುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ. ಒಆರ್‌ಎಸ್ ದ್ರಾವಣ ಮತ್ತು ಜಿಂಕ್ ಮಾತ್ರೆಗಳನ್ನು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವುದರಿಂದ ಈ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಸಭೆಗೆ ಮಾಹಿತಿ ನೀಡಿದರು.

ಮಕ್ಕಳಲ್ಲಿ ಅತಿಸಾರ ಭೇದಿ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಒಆರ್‌ಎಸ್ ಹಾಗೂ ಝಿಂಕ್ ಮಾತ್ರೆಗಳನ್ನು ನೀಡಲಾಗುತ್ತದೆ ಎಂದು ಆರ್‌ಸಿಹೆಚ್ ಅಧಿಕಾರಿ ಡಾ. ಗೋಪಿನಾಥ ಮಾಹಿತಿ ನೀಡಿದರು.

ತಾ. ೧ ರಿಂದ ೧೫ ರವರೆಗೆ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ ನಡೆಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಅಂಗನವಾಡಿ, ವಸತಿಶಾಲೆ ಹಾಗೂ ಶಾಲೆಗಳಲ್ಲಿ ವೈಜ್ಞಾನಿಕವಾಗಿ ಮಕ್ಕಳ ಕೈ ತೊಳೆಯುವ ಬಗ್ಗೆ ತಾ. ೬ ರಂದು ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ತಾ. ೧೦ ರಂದು ರಾಷ್ಟಿçÃಯ ಜಂತುಹುಳು ನಿವಾರಣಾ ದಿನ ಹಾಗೂ ತಾ. ೧೭ ರಂದು ಮಾಪ್ ಅಪ್ ದಿನವನ್ನು ನಡೆಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಶಾಲಾ ಅಂಗನವಾಡಿಗಳಲ್ಲಿ ಮಾತ್ರೆಗಳನ್ನು ನೀಡುವ ಮೂಲಕ ಜಂತುಹುಳು ನಿವಾರಣೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ, ಡಾ. ರಾಮಚಂದ್ರ ಕಾಮತ್, ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.