ಮಡಿಕೇರಿ, ಆ. ೪: ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಗ್ರಾಮ ಸಂಪರ್ಕ ಅಭಿಯಾನ ನಡೆಯಿತು. ಮೂರ್ನಾಡು ಹಾಗೂ ವೀರಾಜಪೇಟೆ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕರಪತ್ರವನ್ನು ನೀಡಿ ಪಕ್ಷದ ಉದ್ದೇಶ ಮತ್ತು ಸಾಧನೆಗಳನ್ನು ಪ್ರಚಾರ ಮಾಡಲಾಯಿತು.

ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಸಂಚಾಲಕ ಎಂ.ಕೆ. ಅಪ್ಪಯ್ಯ ಮಾತನಾಡಿ, ವೀರಾಜಪೇಟೆ ಹಾಗೂ ಮೂರ್ನಾಡು ಪಟ್ಟಣದಲ್ಲಿ ಜನ ಸಂಪರ್ಕ ಅಭಿಯಾನಕ್ಕೆ ಸುಮಾರು ಎರಡು ಸಾವಿರಕ್ಕಿಂತಲೂ ಹೆಚ್ಚು ಜನರಿಂದ ಉತ್ತಮ ಸ್ಪಂದನ ದೊರೆತಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಅಲ್ಲದೆ ಮೂರ್ನಾಡು ಭಾಗದಲ್ಲಿ ಅನೇಕರು ಸ್ವಯಂ ಪ್ರೇರಿತರಾಗಿ ತಮ್ಮ ಹೆಸರು ಮತ್ತು ಮೊಬೈಲ್ ಸಂಪರ್ಕ ಸಂಖ್ಯೆ ನೀಡಿ ಪಾರ್ಟಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದು, ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಈ ಸಂದರ್ಭ ಪಕ್ಷದ ಜಿಲ್ಲಾ ಮುಖಂಡರುಗಳಾದ ಬಾಲಸುಬ್ರಮಣ್ಯ ಕೆ.ಸಿ. ವೆಂಕಟೇಶ್, ಮಂಜುನಾಥ್ ಮತ್ತು ಎನ್.ಬಿ. ಉದಯಕುಮಾರ್ ಹಾಜರಿದ್ದರು.