ಮಡಿಕೇರಿ, ಆ. ೩ : ಪೊನ್ನಂಪೇಟೆ ತಾಲೂಕಿನ ಕಿರುಗೂರು ಕಾಲೋನಿ ಪೈಸಾರಿಯಲ್ಲಿ ರಸ್ತೆ ವ್ಯವಸ್ಥೆ ಇಲ್ಲದೇ ಅಲ್ಲಿ ವಾಸಿಸುತ್ತಿರುವ ೨೪ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ ಎಂದು ಅಲ್ಲಿನ ನಿವಾಸಿಗಳಾದ ಎಂ.ಕೆ. ಶಶಿಕುಮಾರ್, ಪವನ್ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಮಾತನಾಡಿದರು. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಅಲ್ಲಿನ ಗ್ರಾಮಸ್ಥರು, ಶಾಲಾ ಮಕ್ಕಳು ಪರದಾಡುವಂತಾಗಿದೆ. ಊರಿನ ಕೆಲ ತೋಟ ಮಾಲೀಕರ ಗದ್ದೆ ಮೂಲಕ ನಡೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸಾಗಿಸಲು; ಸಾವು ಸಂಭವಿಸಿದಾಗ ಅಂತಿಮ ಸಂಸ್ಕಾರಕ್ಕೆ ಶವಗಳನ್ನು ಕೊಂಡೊಯ್ಯಲು ಕೂಡ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಶಶಿಕುಮಾರ್ ಹಾಗೂ ಪವನ್ಕುಮಾರ್ ಅಳಲು ತೋಡಿಕೊಂಡರು. ಮಳೆಗಾಲದಲ್ಲಿ ಗದ್ದೆಗಳಲ್ಲಿ ನೀರು ತುಂಬಿ ಅದೇ ದಾರಿಯಲ್ಲಿರುವ ಕೀರೆಹೊಳೆಯು ತುಂಬಿ ಹರಿಯುವುದರಿಂದ ಎಲ್ಲಿಗೂ ಸಂಚರಿಸಲಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಈ ಬಗ್ಗೆ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ. ೨೦೧೭ರಲ್ಲಿ ಕೀರೆಹೊಳೆಗೆ ರೂ. ೧೦ ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಯಿತಾದರೂ ತಡೆಗೋಡೆಗಳನ್ನು ಕಟ್ಟಿದ ಕಾರಣ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸೇತುವೆ ಮುರಿದು ಬಿತ್ತು. ಆ ಮೂಲಕ ಸೇತುವೆÀಯೂ ಇಲ್ಲದೆ ರಸ್ತೆಯೂ ಇಲ್ಲದೆ ೨೪ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಸಂಬAಧಿಸಿದವರು ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ ಮುಂದಿನ ಚುನಾವಣೆ ಸಂದರ್ಭ ಮತದಾನ ಮಾಡದಿರಲು ಇಲ್ಲಿನ ಗ್ರಾಮಸ್ಥರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರುಗಳು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆ.ಸಿ. ಸುಬ್ರಮಣಿ, ಎಂ.ಬಿ. ವೇಣು, ಕೆ.ಆರ್. ಅಯ್ಯಪ್ಪ, ಟಿ.ಎಸ್. ಸುರೇಶ್ ಉಪಸ್ಥಿತರಿದ್ದರು.