ಸೋಮವಾರಪೇಟೆ, ಆ.೨: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ಖಂಡಿಸಿರುವ ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣಗುರು ಸೇವಾ ಸಮಿತಿ, ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಈ ಹಿಂದೆಯೂ ಅನೇಕ ಬಾರಿ ಅನ್ಯ ಧರ್ಮದ ದುಷ್ಕರ್ಮಿಗಳು ನಮ್ಮ ಸಮಾಜದ ಯುವಕರನ್ನು ಹತ್ಯೆ ಮಾಡುತ್ತಲೇ ಬಂದಿದ್ದಾರೆ. ಈಗಾಗಲೇ ಪ್ರಶಾಂತ್ ಪೂಜಾರಿ, ಪ್ರವೀಣ್ ಪೂಜಾರಿ, ಕಾಟಿಪಳ್ಳ ಉದಯ ಪೂಜಾರಿ, ವಳಚಿಲ್ ಜಗದೀಶ್, ದಿನೇಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಕಾರ್ತಿಕ್ ಮೇರ್ಲ, ಪೊಳಲಿ ಅನಂತು ಸೇರಿದಂತೆ ಹಲವು ಹತ್ಯೆಗಳು ನಡೆದಿದ್ದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂಘಟನೆಯ ಅಧ್ಯಕ್ಷ ಬಿ.ಎ. ಭಾಸ್ಕರ್, ಕಾರ್ಯದರ್ಶಿ ಇಂದಿರಾ ಮೋಣಪ್ಪ, ಮಾಜೀ ಅಧ್ಯಕ್ಷರುಗಳಾದ ಎನ್.ಡಿ. ಕೃಷ್ಣಪ್ಪ, ಬಿ.ಆರ್. ಚಂದ್ರಹಾಸ್, ಬೇಬಿ ಚಂದ್ರಹಾಸ್, ಸುಂಟಿಕೊಪ್ಪ ಬಿಲ್ಲವ ಸಂಘದ ಅಧ್ಯಕ್ಷ ಮಣಿ ಮುಖೇಶ್, ಗೌರವಾಧ್ಯಕ್ಷ ಬಿ.ಕೆ. ಮೋಹನ್, ಉಪಾಧ್ಯಕ್ಷ ಸುನಿಲ್, ಬೇಳೂರು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್, ಸದಸ್ಯೆ ಪುಷ್ಪಾ ನರೇಶ್, ಬಿಲ್ಲವ ಯುವಕ ಸಂಘದ ಅಧ್ಯಕ್ಷ ಎಂ.ಆರ್. ರಾಘವ ಸೇರಿದಂತೆ ಇತರರು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.