ಮಡಿಕೇರಿ, ಆ. ೨: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆಗಾಲದ ಈಗಿನ ಸನ್ನಿವೇಶ ಒಂದು ರೀತಿಯಲ್ಲಿ ವಿಭಿನ್ನ ಅನುಭವ ಮೂಡಿಸುತ್ತಿದೆ. ಜಿಲ್ಲೆಯ ಚಿತ್ರಣ ಅವಲೋಕಿಸಿದರೆ, ಪ್ರಸ್ತುತ ಮಳೆ ಕ್ಷೀಣಗೊಂಡAತಿದೆ. ಆದರೆ ಬಿಸಿಲಿನ ವಾತಾವರಣದ ನಡುವೆ ದಿಢೀರನೆ ಕಾರ್ಮೋಡ ಆವರಿಸುವುದರೊಂದಿಗೆ ಒಮ್ಮೊಮ್ಮೆ ಸುರಿಯುವ ಭಾರೀ ಮಳೆ ಭಯ ಹುಟ್ಟಿಸುವ ಮಾದರಿಯಲ್ಲಿ ಸುರಿಯುತ್ತದೆ. ಒಂದು ಸ್ಥಳಕ್ಕೆ ಮಳೆ ಧಾರಾಕಾರವಾಗಿ ಸುರಿದರೆ, ಅನತಿ ದೂರದಲ್ಲೇ ಬಿಸಿಲಿನ ವಾತಾವರಣವಿರುತ್ತದೆ. ಇದರ ನಡುವೆ ಕೆಲ ದಿನಗಳಿಂದ ಆಗಾಗ್ಗೆ ಗುಡುಗು ಮಿಂಚು ಅಲ್ಲಲ್ಲಿ ಅನುಭವವಾಗುತ್ತಿರುವುದು ವಿಶೇಷವಾಗಿದೆ.
ಸಾಧಾರಣವಾಗಿ ಆಷಾಡ ಮಾಸದ ಈ ಪರ್ವ ಕಾಲದಲ್ಲಿ ಜಿಲ್ಲೆಯಾದ್ಯಂತ ಧೋ... ಎಂದು ನಿರಂತರವಾಗಿ ಮಳೆ ಸುರಿಯುತಿತ್ತು. ಆದರೆ ಈಗಿನ ಸನ್ನಿವೇಶವೇ ಬೇರೆಯಾಗಿದೆ. ಏಕಾಏಕಿ ಸುರಿಯುವ ಭಾರೀ ಮಳೆಗೆ ಕೆಲವು ಪ್ರದೇಶಗಳು ತತ್ತರಿಸುವಂತಾಗುತ್ತದೆ. ಜುಲೈ ೩೧ ರಂದು ಸಂಪಾಜೆ - ಕೊಯನಾಡು ಭಾಗದಲ್ಲಿ ಇಂತಹದ್ದೇ ಪರಿಸ್ಥಿತಿ ಉಂಟಾಗಿ ಆ ಭಾಗದಲ್ಲಿ ಅಲ್ಲೋಲ ಕಲ್ಲೋಲವುಂಟಾಗಿದೆ. ಕರಿಕೆ ವಿಭಾಗದಲ್ಲೂ ಅಲ್ಲಲ್ಲಿ ಭೂ ಕುಸಿತ ಉಂಟಾಗಿ ಅಂತರರಾಜ್ಯ ಸಂಪರ್ಕ ರಸ್ತೆಗೆ ಭಾರೀ ಹಾನಿಯಾಗಿದೆ.
ಪೊನ್ನಂಪೇಟೆ - ಗೋಣಿಕೊಪ್ಪ - ಬಿಟ್ಟಂಗಾಲ, ವೀರಾಜಪೇಟೆಯಲ್ಲೂ ಜು. ೩೧ರ ಅಪರಾಹ್ನ ಭಾರೀ ಮಳೆ ಸುರಿದಿದೆ. ಆದರೆ ಇನ್ನಿತರ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆ ವರದಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂಜೆ ವೇಳೆಗೆ ಕೆಲಹೊತ್ತು ಧಾರಾಕಾರ ಮಳೆಯಾಗಿ ನಂತರ ಕಡಿಮೆಯಾಯಿತು. ಜನತೆಗೆ ಎಲ್ಲಿ ಯಾವ ಸಂದರ್ಭದಲ್ಲಿ ಮಳೆ ಬೀಳಲಿದೆ ಎಂಬದನ್ನು ಊಹಿಸುವುದೇ ಕಷ್ಟವಾಗಿದೆ. ಪ್ರಸಕ್ತ ವರ್ಷದ ಈ ವಾತಾವರಣ ಒಂದು ರೀತಿಯಲ್ಲಿ ಅಚ್ಚರಿ ಮೂಡಿಸಿದೆ.
ಒಂದು ವಾರ ಭಾರೀ ಮಳೆ ಸೂಚನೆ
ತಾ. ೨ಕ್ಕೆ ಪುಷ್ಯಮಳೆ ಕೊನೆಯಾಗಿದ್ದು, ತಾ. ೩ ರಿಂದ (ಇಂದಿನಿAದ) ಆಶ್ಲೇಷ ಮಳೆ ಆರಂಭಗೊಳ್ಳುತ್ತಿದೆ. ರಾಜ್ಯದಲ್ಲಿ ಕರಾವಳಿ ಸೇರಿದಂತೆ ಒಳನಾಡಿನಲ್ಲಿ ಮುಂದಿನ ಒಂದು ವಾರದ ತನಕ ಭಾರೀ ಮಳೆಯಾಗಲಿದೆ ಎಂಬ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ಹಲವೆಡೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಕೊಡಗು ಜಿಲ್ಲೆಯಲ್ಲೂ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದ್ದು, ಭಾನುವಾರದಿಂದ ಅಲ್ಲಲ್ಲಿ ಮತ್ತೆ ಮಳೆ ಸುರಿಯಲಾರಂಭವಿಸಿದೆ.
ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ ಸೇರಿ ದಕ್ಷಿಣ ಒಳನಾಡಿನ ೧೧ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.